ಮೈಸೂರು : ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರನ್ ವೇ ವಿಸ್ತರಣೆಗೆ ಏರ್ ಪೋರ್ಟ್ ಅಥಾರಿಟಿಯೂ 534 ಕೋಟಿ ರೂ. ಅನುದಾನ ನೀಡಲಿದೆ. ಮೈಸೂರು ಏರ್ಪೋರ್ಟ್ ರನ್ ವೇ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ತೊಡಕಾಗಿ ಪರಿಣಮಿಸಿದೆ ಎಂದು ಸಂಸದ ಪ್ರತಾಪ್ಸಿಂಹ ತಿಳಿಸಿದರು. ಆದರೆ ಭೂ ಸ್ವಾಧೀನ ಪ್ರಕ್ರಿಯೆ ನಾನಾ ಕಾರಣಗಳಿಗೆ ತಡವಾಗುತ್ತಿದೆ. ಹೀಗಾಗಿ ಅನುದಾನ ದೊರೆತಿದ್ದರೂ ರನ್ ವೇ ವಿಸ್ತರಣೆ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ ಎಂದರು. ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 240 ಎಕರೆ ಭೂಮಿಯ ಅಗತ್ಯವಿದೆ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ 2.75 ಕಿ.ಮೀ. ರನ್ ವೇ ನಿರ್ಮಾಣ ಆಗಲಿದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಒಟ್ಟು 319 ಕೋಟಿ ರೂ. ಅನುದಾನದ ಅಗತ್ಯವಿದೆ.
ಈ ಪೈಕಿ ಇದುವರೆಗೆ 175 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ ಎಂದರು. ಚಾಮುಂಡಿ ಬೆಟ್ಟ ಒಂದು ಧಾರ್ಮಿಕ ತಾಣವಾಗಿದೆ. ಅಲ್ಲಿಗೆ ಹೋಗುವವರು ಭಕ್ತಿ ಭಾವದಿಂದ ಹೋಗುತ್ತಾರೆಯೇ ಹೊರತು ಯಾವುದೇ ಪ್ರವಾಸಿ ತಾಣವನ್ನು ವೀಕ್ಷಿಸಲು ಹೋಗುವುದಿಲ್ಲ. ಹೀಗಾಗಿ ಬೆಟ್ಟಕ್ಕೆ ರೋಪ್ ವೇ ಮಾಡುವುದನ್ನು ವಿರೋಧಿಸುತ್ತೇನೆ. ‘ಈ ಹಿಂದೆಯೇ ಶಾಸಕ ಜಿ.ಟಿ. ದೇವೇಗೌಡ ಹಾಗೂ ನಾವೆಲ್ಲರೂ ಸೇರಿ ಚಾಮುಂಡಿಬೆಟ್ಟಕ್ಕೆ ರೋಪ್ ಸಂಬಂಧ ಸಭೆ ನಡೆಸಿ, ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡುವುದು ಬೇಡವೆಂದು ನಿರ್ಧರಿಸಿದ್ದೇವೆ. ನಂದಿ ಬೆಟ್ಟಕ್ಕೆ ಬೇಕಾದರೆ ರೋಪ್ ವೇ ನಿರ್ಮಾಣ ಮಾಡಿಕೊಳ್ಳಲಿ ಎಂದರು.
ಶೀಘ್ರವೇ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಯೋಜನೆ ಬಗ್ಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡುತ್ತೇನೆ ಎಂದರು. ಬೆಂಗಳೂರು-ಮೈಸೂರು ಹೈವೇ ನಿರ್ಮಾಣ ಕ್ರೆಡಿಟ್ ವಾರ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ‘ಹೈವೇ ಮಾಡಿಸಿದ್ದು ಬಿಜೆಪಿ ಸರಕಾರ. 8,500 ಕೋಟಿ ರೂ.ಗಳನ್ನು ಕೇಂದ್ರ ಸರಕಾರವೇ ನೀಡಿದೆ. ಇದಕ್ಕೆ ರಾಜ್ಯ ಸರಕಾರ ಎಂಟೂವರೆ ರೂಪಾಯಿ ಕೂಡ ನೀಡಿಲ್ಲ. ಹೈವೇ ನಿರ್ಮಿಸಿದ್ದು ಕೇಂದ್ರ ಸರಕಾರ ಹಾಗೂ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟಿಸಿದ್ದಾರೆ ಎಂದರು.
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ‘ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವತಿಯಿಂದ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಪ್ರಾದೇಶಿಕ ಆಯುಕ್ತರ ಮುಖಾಂತರ ಸರಕಾರಕ್ಕೆ ಸಲ್ಲಿಸಲಾಗಿದೆ. ಕ್ರೀಡಾಂಗಣ ನಿರ್ಮಾಣದಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರುವುದರಿಂದ ಸರಕಾರವು ಈ ಯೋಜನೆಗೆ ಅನುಮೋದನೆ ನೀಡಲಿದೆ.