ಶಿರಸಿ: ಕುಮಟಾ ಶಿರಸಿ ಹೆದ್ದಾರಿಯ ಶಿರಸಿಯ ಬಂಡಲ ಬಳಿ ಶುಕ್ರವಾರ ಸರಕಾರಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಕಂಬಳದ ಐವರು ಸಾವನ್ನಪ್ಪಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಕಿನ್ನಿಕಂಬಳದ ಪಿ.ರಾಮಕೃಷ್ಣ ರಾವ್ (69), ಪತ್ನಿ ವಿದ್ಯಾಲಕ್ಷ್ಮೀ ರಾವ್ (64), ರಾಮಕೃಷ್ಣ ರಾವ್ ಅವರ ತಮ್ಮನ ಪತ್ನಿ ಪುಷ್ಪಾ ಎಂ.ರಾವ್ (57), ಅವರ ತಮ್ಮನ ಮಗ ಸುಹಾಸ್ (30), ಭಾವ ಅರವಿಂದಾಕ್ಷ (27) ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಗಣೇಶ್ ರಾವ್ ಮತ್ತು ಸರಸ್ವತಿ ದಂಪತಿಯ ಎರಡನೇ ಪುತ್ರ ಸುಮಂತ್ ಅವರ ಮದುವೆ ಡಿಸೆಂಬರ್ 6 ರಂದು ಚೆನ್ನೈನಲ್ಲಿ ನಡೆದಿತ್ತು. ಡಿಸೆಂಬರ್ 10 ರಂದು ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ನೂಯಿಯಲ್ಲಿ ಆರತಕ್ಷತೆ ನಡೆಯಲಿರುವ ಕಾರಣ ರಾಮಕೃಷ್ಣ ಅವರ ಮನೆಯಲ್ಲಿ ಎಲ್ಲಾ ಸಂಬಂಧಿಕರು ಜಮಾಯಿಸಿದ್ದರು. ಈ ನಡುವೆ, ಕುಟುಂಬದ ಐವರು ಸದಸ್ಯರು ಶಿರಸಿಯಲ್ಲಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ದುರಂತ ನಡೆದಿದೆ.
ಕಿನ್ನಿಕಂಬಳ ರಾಧಾಕೃಷ್ಣ ಭಜನಾ ಮಂದಿರದ ಅರ್ಚಕರಾಗಿದ್ದ ರಾಮಕೃಷ್ಣ ರಾವ್, ಗುರುಪುರ ಕೈಕಂಬದಲ್ಲಿ ರಿಕ್ಷಾ ಚಾಲಕರಾಗಿದ್ದರು. ಗುರುವಾರದಂದೂ ನಗರ ಭಜನೆ ಸಂಕೀರ್ತನೆಗೆ ತೆರಳಿದ್ದರು. ಕಿನ್ನಿಕಂಬಳ ರಾಧಾಕೃಷ್ಣ ಭಜನಾ ಮಂದಿರದ ನಗರ ಭಜನೆ ಸಂಕೀರ್ತನೆಯಲ್ಲಿ ಮಂದಿರದ ಅರ್ಚಕರಾಗಿ ದೇವರನ್ನು ಹೊತ್ತು ಸಾಗಿದ್ದರು. ಸದಾ ಜನಾನುರಾಗಿಯಾಗಿ , ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದವರು.
ಮೃತರ ಅಂತ್ಯಕ್ರಿಯೆಯನ್ನು ಪಡುಪೆರಾರ ರುದ್ರಭೂಮಿಯಲ್ಲಿ ನಡೆಸಲಾಗುವುದು. ಪುತ್ರ ಜಪಾನ್‌ನಿಂದ ಸ್ವಗ್ರಾಮಕ್ಕೆ ಬಂದ ನಂತರ ಪುಷ್ಪಾ ರಾವ್ ಅವರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎನ್ನಲಾಗಿದೆ.
ಕಿನ್ನಿಕಂಬಳದ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢಶಾಲಾ ವಾರ್ಷಿಕೋತ್ಸವ ಶುಕ್ರವಾರ ನಡೆಯಬೇಕಿತ್ತು. ಆದರೆ ಈಗ ಅದನ್ನು ಮುಂದೂಡಲಾಗಿದೆ.












