ಪ್ರೊ.‌ ಪಾದೂರು ಶ್ರೀಪತಿ ತಂತ್ರಿ ಅವರ ೮೦ ಸಂವತ್ಸರದ ಹಿನ್ನೆಲೆಯಲ್ಲಿ ವಿಚಾರಗೋಷ್ಠಿ, ಅಭಿನಂದನಾ‌ ಸಮಾರಂಭ

ಉಡುಪಿ: ಹಿರಿಯ ಶಿಕ್ಷಣ ತಜ್ಞ ಪ್ರೊ. ಪಾದೂರು ಶ್ರೀಪತಿ ತಂತ್ರಿ ಅವರು ೮೦ ಸಂವತ್ಸರ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಇದೇ ೨೧ರಂದು ನಗರದ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ನ ಒಳಾಂಗಣ ಸಭಾಂಗಣದಲ್ಲಿ ವಿಚಾರಗೋಷ್ಠಿ ಹಾಗೂ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಅಭಿನಂದನ ಸಮಿತಿಯ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಗುರುವಾರ ಸುದ್ದಿಗೋಷ್ಢಿಯಲ್ಲಿ‌ತಿಳಿಸಿದರು.
ಅಂದು ಬೆಳಿಗ್ಗೆ ೯.೩೦ಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ವಿಚಾರಗೋಷ್ಠಿಯನ್ನು ಉದ್ಘಾಟಿಸುವರು. ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಲ್ಲೇಪುರಂ ವೆಂಕಟೇಶ ಅವರು ಶ್ರೀಪತಿ ತಂತ್ರಿಯವರ ‘ಆಜೀವಿಕರು ಮತ್ತು ವೇದೋತ್ತರ ದಾರ್ಶನಿಕ ಬೆಳವಣಿಗೆಗಳು’ ಪುಸ್ತಕವನ್ನು ಬಿಡುಗಡೆಗೊಳಿಸುವರು. ಕರ್ನಾಟಕ ಜ್ಞಾನ ಆಯೋಗದ ಮಾಜಿ ಕಾರ್ಯದರ್ಶಿ ಡಾ. ಕೆ. ಸುಧಾ ರಾವ್‌ ಅಧ್ಯಕ್ಷತೆ ವಹಿಸುವರು ಎಂದರು.
ಮೊದಲ ವಿಚಾರಗೋಷ್ಠಿಯಲ್ಲಿ ಕನ್ನಡ ಲಿಪಿ ಸಂಶೋಧಕ ಡಾ. ಕೆ.ಪಿ. ರಾವ್‌, ವಿದ್ವಾಂಸರಾದ ಲಕ್ಷೀಶ ತೋಳ್ಪಾಡಿ, ಪ್ರಭಾಕರ ಜೋಷಿ, ಗುಂಡಿಬೈಲ್‌ ಸುಬ್ರಹ್ಮಣ್ಯ ಭಟ್‌ ಹಾಗೂ ಎರಡನೇ ವಿಚಾರಗೋಷ್ಠಿಯಲ್ಲಿ ಪ್ರೊ. ರವಿಶಂಕರ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಮುರಳೀಧರ ಉಪಾಧ್ಯಾಯ ಮತ್ತು ಪ್ರೊ. ರಾಜಾರಾಮ ತೋಳ್ಪಾಡಿ ಭಾಗವಹಿಸುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಎಸ್‌.ವಿ. ಭಟ್‌, ಪಿ. ಭಾರ್ಗವ ತಂತ್ರಿ, ವೈಷ್ಣವಿ ತಂತ್ರಿ, ಜಯಶಂಕರ್‌, ವಾಸುದೇವ ಭಟ್‌ ಪೆರಂಪಳ್ಳಿ ಇದ್ದರು.
ಅಭಿನಂದನಾ ಸಮಾವೇಶ:
ಅಂದು ಸಂಜೆ ೪ ಗಂಟೆಗೆ ನಡೆಯುವ ಅಭಿನಂದನ ಸಮಾವೇಶದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆರ್ಶಿರ್ವಚನ ನೀಡುವರು. ಕಲಬುರಗಿ ಕೇಂದ್ರೀಯ ವಿ.ವಿ.ಯ ಕುಲಾಧಿಪತಿ ಡಾ. ಎನ್‌.ಆರ್‌. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಒರಿಸ್ಸಾ ಕೇಂದ್ರೀಯ ವಿ.ವಿ.ಯ ಕುಲಾಧಿಪತಿ  ಪ್ರೊ. ಪಿ.ವಿ. ಕೃಷ್ಣಭಟ್‌, ಮಂಗಳೂರು ವಿ.ವಿ.ಯ ಕುಲಪತಿ ಪ್ರೊ. ಪಿ.ಎಸ್‌. ಎಡಪಡಿತ್ತಾಯ, ಮಾಜಿ ಕುಲಪತಿ ಪ್ರೊ. ಕೆ. ಭೈರಪ್ಪ ಹಾಗೂ ಹಿರಿಯ ವಕೀಲ ಬಿ.ವಿ. ಆಚಾರ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.