ನವದೆಹಲಿ: ನಿಲ್ದಾಣದ ಸಮೀಪ ಯುಎಫ್ಒ (ಯೂನಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್) ಹಾರಾಟ ನಡೆಸಿದ್ದನ್ನು ಕೆಲವರು ಕಂಡಿದ್ದು, ಇದು ನಿತ್ಯದ ವಿಮಾನಗಳ ಹಾರಾಟಕ್ಕೆ ಕೆಲಕಾಲ ಅಡ್ಡಿ ಉಂಟು ಮಾಡಿತ್ತು. ವಾಯುಪಡೆಯು 2 ರಫೇಲ್ ವಿಮಾನಗಳಿಂದ ಹುಡುಕಾಟ ನಡೆಸಿದೆ.ಭೂಮಿಯ ಮೇಲೆ ಆಗಾಗ್ಗೆ ಅಪರಿಚಿತ ವಸ್ತುಗಳು ಆಗಸದಲ್ಲಿ ಹಾರಾಡಿದ ಬಗ್ಗೆ ವರದಿಯಾಗುತ್ತಿರುತ್ತದೆ. ಅಂಥಹದ್ದೇ ವಿದ್ಯಮಾನ ಮಣಿಪುರದ ಇಂಫಾಲ ವಿಮಾನ ನಿಲ್ದಾಣದ ಬಳಿ ನಡೆದಿದೆ ಎಂದು ಹೇಳಲಾಗಿದೆ.ಮಣಿಪುರದ ಇಂಫಾಲದಲ್ಲಿ ಅಪರಿಚಿತ ವಸ್ತುವೊಂದು ಆಗಸದಲ್ಲಿ ಹಾರಾಡಿರುವುದು ಕಂಡುಬಂದಿದೆ.
ರಫೇಲ್ ವಿಮಾನಗಳಿಂದ ತಪಾಸಣೆ: ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ರಫೇಲ್ ಯುದ್ಧ ವಿಮಾನಗಳನ್ನು ಹಶಿಮಾಲಾ ವಾಯುನೆಲೆಯಲ್ಲಿ ನಿಯೋಜಿಸಲಾಗಿದೆ. ಅಪರಿಚಿತ ವಸ್ತುಗಳು (ಯುಎಫ್ಒ) ಇಂಫಾಲ ವಿಮಾನ ನಿಲ್ದಾಣದ ಬಳಿ ಹಾರಾಡಿವೆ ಎಂದು ಅಲ್ಲಿದ್ದವರು ಹೇಳಿದ್ದಾರೆ. ಈ ಬಗ್ಗೆ ತಿಳಿದ ತಕ್ಷಣವೇ ಸೇನಾಧಿಕಾರಿಗಳು ಒಂದು ರಫೇಲ್ ಯುದ್ಧ ವಿಮಾನದಿಂದ ಯುಎಫ್ಒ ಪತ್ತೆಯಾದ ಪ್ರದೇಶದಲ್ಲಿ ಹಾರಾಟ ನಡೆಸಿ ಪರಿಶೀಲಿಸಿದೆ. ಆದರೆ, ಅಂತಹ ಯಾವುದೇ ವಸ್ತು ಕಂಡುಬಂದಿಲ್ಲ. ಬಳಿಕ ರಫೇಲ್ ವಾಯುನೆಲೆಗೆ ವಾಪಸಾಗಿದೆ.ನವೆಂಬರ್ 19 ರಂದು ಮಧ್ಯಾಹ್ನ 2.30 ರ ಸುಮಾರಿನಲ್ಲಿ ಇಂಫಾಲದ ಆಕಾಶದಲ್ಲಿ ಯುಎಫ್ಇ ಕಂಡುಬಂದಿದ್ದಾಗಿ ಮಾಹಿತಿ ಬಂದಿದೆ. ತಕ್ಷಣವೇ ಹಸಿಮಾಲಾ ವಾಯುನೆಲೆಯಿಂದ ಭಾರತೀಯ ವಾಯುಪಡೆಯು ರಫೇಲ್ ಯುದ್ಧ ವಿಮಾನ ಹಾರಾಟ ನಡೆಸಿ ಪರಿಶೀಲಿಸಿದೆ. ಆದರೆ, ಅಂತಹ ಯಾವುದೇ ಅಪರಿಚಿತ ವಸ್ತುವು ಕಂಡು ಬಂದಿಲ್ಲ ಎಂದು ಸೇನಾಪಡೆ ತಿಳಿಸಿದೆ.
ಯುಎಫ್ಒ ಸಂಜೆ 4 ಗಂಟೆಯವರೆಗೆ ವಾಯುನೆಲೆಯ ಪಶ್ಚಿಮಕ್ಕೆ ಚಲಿಸುತ್ತಿತ್ತು. ಅದು ಬರಿಗಣ್ಣಿಗೂ ಕಾಣಿಸುತ್ತಿತ್ತು ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಧಿಕಾರಿಯೊಬ್ಬರು ತಿಳಿಸಿದರು. ಹೀಗಾಗಿ ಆತಂಕ ಉಂಟಾದ ಹಿನ್ನೆಲೆ ಹಲವು ವಾಣಿಜ್ಯ ವಿಮಾನಗಳ ಹಾರಾಟವನ್ನು ಕೆಲಗಂಟೆ ಕಾಲ ನಿಲ್ಲಿಸಲಾಗಿತ್ತು.
ಕೋಲ್ಕತ್ತಾದಿಂದ ಆಗಮಿಸುತ್ತಿದ್ದ ಇಂಡಿಗೋ ವಿಮಾನ ಸೇರಿದಂತೆ ಹಲವು ವಿಮಾನಗಳ ಮಾರ್ಗವನ್ನು ಬದಲಿಸಲಾಗಿತ್ತು. 25 ನಿಮಿಷಗಳ ನಂತರ ವಿಮಾನವನ್ನು ಗುವಾಹಟಿಗೆ ಕಳುಹಿಸಲಾಯಿತು. ತಡವಾದ ವಿಮಾನಗಳು ಸುಮಾರು 3 ಗಂಟೆಗಳ ಬಳಿಕ ಇಂಫಾಲ ನಿಲ್ದಾಣದಿಂದ ಹೊರಟಿವೆ.ಇದಾದ ಬಳಿಕ ಮತ್ತೆ ಇನ್ನೊಂದು ರಫೇಲ್ ವಿಮಾನದಿಂದ ಯುಎಫ್ಒ ಕಾಣಿಸಿಕೊಂಡ ಪ್ರದೇಶದಲ್ಲಿ ಪಾರುಗಾಣಿಕೆ ನಡೆಸಿತು. ಆಗಲೂ ಯಾವುದೇ ಅಪರಿಚಿತ ಹಾರಾಟದ ವಸ್ತು ಕಂಡುಬರಲಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಇಂಫಾಲ್ ವಿಮಾನ ನಿಲ್ದಾಣದ ಮೇಲೆ UFO ಹಾರಾಡಿದ ಬಗ್ಗೆ ವಿಡಿಯೋಗಳನ್ನು ಸಂಬಂಧಿಸಿದ ಏಜೆನ್ಸಿಗಳು ಪರಿಶೀಲಿಸುತ್ತಿವೆ. ಏನಾದರೂ ಕಂಡುಬಂದಿದೆಯಾ ಎಂಬ ಬಗ್ಗೆ ತಪಾಸಣೆ ನಡೆಯುತ್ತಿದೆ ಎಂದು ಸೇನಾಪಡೆಯ ಅಧಿಕಾರಿಗಳು ತಿಳಿಸಿದರು.