ಇಂಫಾಲದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ UFO? ಭಾರತೀಯ ವಾಯು ಸೇನೆಯಿಂದ ವಾಯು ರಕ್ಷಣಾ ಪ್ರತಿಕ್ರಿಯೆ

ಇಂಫಾಲ್: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿರುವ ಬಿರ್ ಟಿಕೇಂದ್ರಜಿತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಂತ್ರಿತ ವಾಯುಪ್ರದೇಶವನ್ನು ಅಪರಿಚಿತ ಹಾರುವ ವಸ್ತು(UFO) ಕಂಡ ನಂತರ ಸುಮಾರು ಮೂರು ಗಂಟೆಗಳ ಕಾಲ ಮುಚ್ಚಲಾಗಿತ್ತು ಎಂದು ವರದಿಯಾಗಿದೆ.

ಭಾನುವಾರ ಮಧ್ಯಾಹ್ನ 2.30 ಕ್ಕೆ ಇಂಫಾಲ್ ಏರ್ ಟ್ರಾಫಿಕ್ ಕಂಟ್ರೋಲ್ (ATC) ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನಿಯಂತ್ರಣ ಕೊಠಡಿಯಿಂದ ಎಟಿಸಿ ಟವರ್ ಮೇಲೆ ಅಪರಿಚಿತ ಹಾರುವ ವಸ್ತು ಕಾಣಿಸಿಕೊಂಡಿದೆ ಎಂದು ಕರೆ ಬಂದಿದೆ. ಎಟಿಸಿ ಟವರ್‌ನ ಟೆರೇಸ್‌ನಿಂದ ವಸ್ತುವು ಗೋಚರಿಸಿದೆ; ಏರ್‌ಲೈನ್ಸ್ ಮತ್ತು ಸಿಐಎಸ್‌ಎಫ್ ಸಿಬ್ಬಂದಿ ಸೇರಿದಂತೆ ಮೈದಾನದಲ್ಲಿದ್ದ ಜನರು ಇದನ್ನು ನೋಡಿದ್ದಾರೆ. ವಸ್ತುವಿನ ಬಣ್ಣ ಬಿಳಿಯಾಗಿತ್ತು.

ಅಪರಿಚಿತ ವಸ್ತು ಟರ್ಮಿನಲ್ ಕಟ್ಟಡದ ಮೇಲೆ ಹಾರಿದೆ ಮತ್ತು ಎಟಿಸಿ ಗೋಪುರದ ಮೇಲೆ ದಕ್ಷಿಣಕ್ಕೆ ಚಲಿಸಿದೆ ಮತ್ತು ಸ್ವಲ್ಪ ಸಮಯದವರೆಗೆ ಅಲ್ಲಿಯೇ ಇತ್ತು ಎನ್ನಲಾಗಿದೆ. ನಂತರ ಅದು ರನ್‌ವೇಯ ನೈಋತ್ಯಕ್ಕೆ ಚಲಿಸಿ, ಸಂಜೆ 4.05 ವೇಳೆಗೆ ಕಣ್ಮರೆಯಾಗಿದೆ.

ಅಪರಿಚಿತ ಹಾರುವ ವಸ್ತುವನ್ನು ಕಂಡ ಕೂಡಲೇ ವಾಯುಪ್ರದೇಶವನ್ನು ಮುಚ್ಚಿ ಎರಡು ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳನ್ನು ಏಪ್ರನ್ ನಲ್ಲಿ ನಿಲ್ಲಿಸಲಾಗಿತ್ತು. ಮುಂದಿನ ಸೂಚನೆ ಬರುವವರೆಗೂ ಎಲ್ಲಾ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ತಡೆಹಿಡಿಯಲಾಗಿತ್ತು ಮತ್ತು ವಾಯುಪ್ರದೇಶವನ್ನು ಮುಚ್ಚುವ NOTAM (ಏರ್‌ಮೆನ್‌ಗೆ ಸೂಚನೆ) ಫ್ಲ್ಯಾಷ್ ಮಾಡಲಾಯಿತು.

ಇಂಫಾಲ್ ವಿಮಾನ ನಿಲ್ದಾಣದಿಂದ ಸೂಚನೆ ಆಧಾರದ ಮೇಲೆ ಭಾರತೀಯ ವಾಯುಪಡೆ ತನ್ನ ವಾಯು ರಕ್ಷಣಾ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಸಕ್ರಿಯಗೊಳಿಸಿದೆ. ಆ ನಂತರ ಸಣ್ಣ ವಸ್ತು ಕಾಣಿಸಲಿಲ್ಲ ಎಂದು ಪೂರ್ವ ವಾಯು ಕಮಾಂಡ್ ತಿಳಿಸಿದೆ.

ಇಂಫಾಲ್ ಎಟಿಸಿ ವಾಯುಪ್ರದೇಶದ ಕಾರ್ಯಾಚರಣೆ ಪುನರಾರಂಭಿಸಿತು ಮತ್ತು ವಿಮಾನ ಕಾರ್ಯಾಚರಣೆಗಳು ಸಂಜೆ 5.50 ಕ್ಕೆ ಪುನರಾರಂಭಗೊಂಡಿವೆ ಎಂದು ವರದಿಯಾಗಿದೆ.