ಮಕ್ಕಳ ಪೌಷ್ಟಿಕ ಆಹಾರ ಸರಬರಾಜಿನಲ್ಲಿ ಅಕ್ರಮ ಆರೋಪ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ದ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಪೌಷ್ಟಿಕ ಆಹಾರ ಸರಬರಾಜಿನಲ್ಲಿ 600 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಭ್ರಷ್ಟಾಚಾರದ ನಡೆದಿದೆ ಎಂದು ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿದಂತೆ ಇತರರ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ.

ವಕೀಲ ನಟರಾಜ್ ಶರ್ಮಾ ಎಂಬುವವರು ದೂರು ನೀಡಿದ್ದು, ಅನರ್ಹ ಸಹಕಾರ ಸಂಘಗಳಿಗೆ ಮಕ್ಕಳ ಪೌಷ್ಟಿಕ ಆಹಾರವನ್ನು ಸರಬರಾಜಿಗೆ ಗುತ್ತಿಗೆ ನೀಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಶಿವಮೊಗ್ಗದ ಹರಿಹರೇಶ್ವರ ಉದ್ಯೋಗ ಮತ್ತು ಮಹಿಳಾ ಸೇವಾ ಸಂಘ, ಬೆಳಗಾವಿಯ ರೇಣುಕಾದೇವಿ ಪ್ರಗತಿಪರ ಮಹಿಳಾ ಸೇವಾ ಸಂಘ ಮತ್ತು ಕಲಬುರಗಿಯ ಸಂಜೀವಿನಿ ಮಹಿಳಾ ವಿಕಾಸ ಸೇವಾ ಸಂಘವು ಕಪ್ಪು ಪಟ್ಟಿಗೆ ಸೇರಿರುವ ಕ್ರಿಸ್ಟಿ ಫೈಡ್‌ ಗ್ರಾಮ್‌ ಎಂಬ ಕಂಪನಿಯ ಜತೆಗೆ ಶಾಮೀಲಾಗಿ ಅಕ್ರಮ ನಡೆಸುತ್ತಿದೆ. ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡುವ ಟೆಂಡರ್‌ ಅನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಅನರ್ಹ ಸಂಸ್ಥೆಗಳಿಗೆ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಗುತ್ತಿಗೆದಾರರಿಂದ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಕಳಪೆ ಗುಣಮಟ್ಟದ್ದಾಗಿರುತ್ತದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸ್ಥಳೀಯ ಸೇವಾ ಸಂಘಗಳೇ ಆಹಾರ ಪೂರೈಕೆ ಮಾಡುವಂತೆ ಹೈ ಕೋರ್ಟ್ ಆದೇಶ ನೀಡಿತ್ತು. ಆದರೆ ಆದೇಶ ಉಲ್ಲಂಘನೆ ಮಾಡಿ ಕಪ್ಪುಪಟ್ಟಿಯಲ್ಲಿರುವ ಕಂಪನಿಗೆ ಟೆಂಡರ್ ನೀಡಲಾಗಿದೆ. ಮೂರು ಸಂಘ ಸಂಸ್ಥೆಗಳಿಗೆ ವರ್ಷಕ್ಕೆ ಸುಮಾರು ಎರಡು ಸಾವಿರ ಕೋಟಿ ರೂ.ವಹಿವಾಟು ಇರುವ ಗುತ್ತಿಗೆಯನ್ನು ನೀಡಲಾಗುತ್ತಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.