ವಿಶ್ವ ಕಪ್ ಪಂದ್ಯಾಟದಲ್ಲಿ ಕಳಪೆ ಪ್ರದರ್ಶನ: ನೈತಿಕ ಹೊಣೆ ಹೊತ್ತು ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ಬಾಬರ್ ಆಜಂ

ಕರಾಚಿ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ನೈತಿಕ ಹೊಣೆ ಹೊತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಬಾಬರ್​ ಆಜಂ ರಾಜೀನಾಮೆ ನೀಡಿದ್ದಾರೆ.

ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬಹುದಾದ ಪ್ರಮುಖ ತಂಡಗಳಲ್ಲಿ ಒಂದಾಗಿ ಸ್ಪರ್ಧೆಗಿಳಿದಿದ್ದ ಪಾಕಿಸ್ತಾನ ತಂಡ ಆಡಿದ 9 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು, 5 ರಲ್ಲಿ ಸೋತಿದೆ. ಇದು ಪಾಕ್ ಮಾಜಿ ಆಟಗಾರರ, ಕ್ರಿಕೆಟ್ ಆಡಳಿತ ಮಂಡಳಿಯ ಹಾಗೂ ಪಾಕ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಪಾಕ್​ ವಿಶ್ವಕಪ್​ ಅಭಿಯಾನ ಮುಗಿಸುವ ಮುನ್ನವೇ ಬಾಬರ್​ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಇದೀಗ ವಿಶ್ವಕಪ್ ಅಭಿಯಾನವನ್ನು ಮುಗಿಸಿ ತಾಯ್ನಾಡಿಗೆ ಮರಳಿದ ಬಳಿಕ ಬಾಬರ್ ಆಝಂ, ಕ್ರಿಕೆಟ್​ನ ಎಲ್ಲಾ ಸ್ವರೂಪದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಬಾಬರ್​ ಆಜಂ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್​ನಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ನಾಯಕನ ಸ್ಥಾನಕ್ಕೆ ಇಬ್ಬರು ಆಟಗಾರರು ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್ ಮೊಹಮ್ಮದ್ ರಿಜ್ವಾನ್, ವೇಗಿ ಶಹೀನ್​ ಅಫ್ರಿದಿ ನಾಯಕತ್ವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎಂದು ವರದಿಯಾಗಿದೆ.