ಕುಂದಾಪುರ: ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನಿಲ್ಲಿಸಿದ್ದ 9 ಬೋಟ್ ಗಳು ಅಗ್ನಿ ಅವಘಡದಿಂದ ಹಾನಿಗೀಡಾಗಿದ್ದು ಘಟನಾ ಸ್ಥಳಕ್ಕೆ ಶಾಸಕ ಯಶ್ ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ, ಅಗ್ನಿ ಅವಘಡದಿಂದ ಸುಮಾರು 10 ಕೋಟಿಯಷ್ಟು ನಷ್ಟ ಉಂಟಾಗಿದ್ದು, ರಾಜ್ಯ ಸರಕಾರ ಕೂಡಲೇ ಬೋಟ್ ಮಾಲೀಕರಿಗೆ ತಲಾ 50 ಲಕ್ಷ ಪರಿಹಾರ ನೀಡಿ ಸಂಕಷ್ಟಕ್ಕೀಡಾದ ಮೀನುಗಾರರಿಗೆ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಬೇಕು ಎಂದಿದ್ದಾರೆ.
ಜಿಲ್ಲೆಯ ಐವರು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಜೊತೆಯಾಗಿ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಶೇಷ ಪ್ರಕರಣದಡಿ ಗರಿಷ್ಠ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕರಾವಳಿಯ ಎಲ್ಲಾ ಮೀನುಗಾರಿಕೆ ಬಂದರುಗಳಲ್ಲಿ ಬೋಟ್ ರಿಪೇರಿಗೆ ತಂಗುವ ಸ್ಥಳವನ್ನು ನಿಗದಿ ಮಾಡಿ ಅಗ್ನಿಶಾಮಕ ಘಟಕ ಸಹಿತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾಸ್ಟರ್ ಪ್ಲಾನ್ ಮಾಡಲು ಮೀನುಗಾರಿಕೆ ಇಲಾಖೆ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದ್ದಾರೆ.