ಮಂಗಳೂರು: ಮಂಗಳೂರಿನ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಸ್ಥಳೀಯ ಖಾಸಗಿ ವಾಹನಗಳಿಗೆ ಜುಲೈ 16 ರಿಂದ ಸುಂಕ ವಿಧಿಸುವ ಹೆದ್ದಾರಿ ಪ್ರಾಧಿಕಾರದ ತೀರ್ಮಾನಕ್ಕೆ ತಡೆ ವಿಧಿಸಬೇಕು ಎಂದು ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ದಕ್ಷಿಣ ಜಿಲ್ಲಾಧಿಕಾರಿಯನ್ನು ಸೋಮವಾರ ಭೇಟಿ ಮಾಡಿತು.
ಟೋಲ್ ಗೇಟನ್ನು ಶಾಶ್ವತವಾಗಿ ಮುಚ್ವುವ ತೀರ್ಮಾನ ಜಾರಿಯಾಗಬೇಕು. ಯಾವುದೇ ಕಾರಣಕ್ಕೂ ನಾಳೆಯಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಬಾರದು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಬೇಕು, ಅಲ್ಲಿಯವರಗೆ ಯಥಾಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಲಾಯಿತು.
ಜನರ ಆಗ್ರಹವನ್ನು ಮೀರಿ ಸುಂಕ ಸಂಗ್ರಹಿಸಲು ಮುಂದಾದರೆ ಸಮಿತಿ ಅದನ್ನು ತಡೆಯಲಿದೆ. ನಾಳೆ ಬೆಳಗ್ಗೆ 7.30ಕ್ಕೆ ಪಕ್ಷಾತೀತವಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಂಘಟನೆ ಪ್ರಮುಖರು, ನಾಗರಿಕರ ಬೆಂಬಲದೊಂದಿಗೆ ಟೋಲ್ ಗೇಟ್ ಮುಂಭಾಗ ಸೇರಲಿದ್ದು, ಟೋಲ್ ಸಂಗ್ರಹಕ್ಕೆ ಮುಂದಾದರೆ ಸಾಮೂಹಿಕವಾಗಿ ತಡೆಯಲಾಗುವುದು ಎಂದು ನಿಯೋಗ ತಿಳಿಸಿದೆ.
ಜಿಲ್ಲಾಧಿಕಾರಿ ಅವರು ಬೇಡಿಕೆಗಳನ್ನು ಆಲಿಸಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರ ಜತೆಗೆ ಚರ್ಚಿಸಿ ಪರಿಹಾರಕ್ಕೆ ಯತ್ನಿಸುವುದಾಗಿ ತಿಳಿಸಿದರು.