ಉಡುಪಿ: ರಸ್ತೆ ಬದಿ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದ ಹೊರ ರಾಜ್ಯ ಮತ್ತು ಜಿಲ್ಲೆಯ ಆರು ಮಂದಿ ಶಂಕರಪುರದ ವಿಶ್ವಾಸದ ಮನೆಯ ಆರೈಕೆ ಹಾಗೂ ಶುಶ್ರೂಷೆಯಿಂದ ಗುಣಮುಖರಾಗಿದ್ದು, ಜು.16ರಂದು ಇವರೆಲ್ಲರನ್ನು ಅವರ ಕುಟುಂಬಗಳಿಗೆ ಒಪ್ಪಿಸಲಾಗುತ್ತಿದೆ.
2015ರ ಡಿ.31ರಂದು ಉಡುಪಿ ಶ್ರೀಕೃಷ್ಣ ಮಠದ ಬಳಿ ತುಮಕೂರು ಕುಣಿಗಲ್ ನಿವಾಸಿ ಶೋಭಾ, 2016ರ ಮೇ 4ರಂದು ಕುಂದಾಪುರ ಶಾಸ್ತ್ರ ಸರ್ಕಲ್ ಬಳಿ ಬೆಂಗಳೂರಿನ ಸುರೇಶ್(40), ಮೇ 11ರಂದು ಕೊಲ್ಲೂರು ಕ್ರಾಸ್ ಬಳಿ ತೆಲಂಗಾಣದ ನಂಬಯ್ಯ(50), ನ.22ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿ ಗದಗ ನಿವಾಸಿ ವಿಠಲ್(45), 2017ರ ಮಾ.24 ರಂದು ಉಡುಪಿ ಶಂಕರಪುರ ರಸ್ತೆ ಬದಿಯಲ್ಲಿ ತೆಲಂಗಾಣದ ಭೋಜಮ್ಮ (45), 2019ರ ಫೆ. 8ರಂದು ಶಂಕರಪುರ ಬಸ್ ನಿಲ್ದಾಣದ ಬಳಿ ಆಂಧ್ರ ಪ್ರದೇಶದ ಸುಜಾತ(30) ಎಂಬವರು ಪತ್ತೆಯಾಗಿದ್ದರು. ಇವರಿಗೆ ಸಂಸ್ಥೆಯಲ್ಲಿ ಸರಿಯಾದ ಆರೈಕೆ ಹಾಗೂ ಚಿಕಿತ್ಸೆ ನೀಡಿದ್ದು, ಇದರಿಂದ ಇವರೆಲ್ಲ ಗುಣಮುಖರಾಗಿ ತಮ್ಮ ಮನೆಯ ವಿಳಾಸ ಹಾಗೂ ಹೆಸರು ತಿಳಿಸಿದ್ದಾರೆ. ಇದೀಗ ಇವರೆಲ್ಲರನ್ನು ಅವರ ಕುಟುಂಬಗಳಿಗೆ ತಲುಪಿಸುವ ಉದ್ದೇಶದಿಂದ ಸಂಸ್ಥೆಯ ಸ್ವಂತ ವಾಹನದಲ್ಲಿ ಸಂಸ್ಥೆಯ ಕಾರ್ಯಕರ್ತರು ಕರೆದುಕೊಂಡು ಹೋಗಲಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಪಾಸ್ಟರ್ ಸುನೀಲ್ ಜಾನ್ ಡಿಸೋಜ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ಪ್ರಸ್ತುತ 150 ಮಂದಿ ಆರೈಕೆಯಲ್ಲಿದ್ದು, ಈವರೆಗೆ ಸುಮಾರು 800 ಮಂದಿ ಮಾನಸಿಕ ಅಸ್ವಸ್ಥರನ್ನು ಗುಣಮುಖರನ್ನಾಗಿಸಿ ಅವರ ಕುಟುಂಬ ಗಳಿಗೆ ಸುರಕ್ಷಿತವಾಗಿ ಒಪ್ಪಿಸಲಾಗಿದೆ. ಕೆದೂರು ಸ್ಪೂರ್ತಿಧಾಮದಿಂದ ವರ್ಗಾ ಯಿಸಲಾದ 80ವರ್ಷಕ್ಕಿಂತ ಮೇಲ್ಪಟ್ಟ 30 ವೃದ್ಧರಿಗೆ ನಮ್ಮಲ್ಲಿ ಅವಕಾಶ ನೀಡಲಾಗಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಫಾ.ಝೇವಿಯರ್ ಮ್ಯಾಥ್ಯೂ ಕೆಸ್ತಲಿನೋ, ಎಡ್ವರ್ಡ್ ಮಿನೇಜಸ್, ಡೇವಿಡ್ ಲೂವಿಸ್ ಉಪಸ್ಥಿತರಿದ್ದರು.