ಎಲೆಕ್ಟ್ರಿಕ್, ಸಿಎನ್‌ಜಿ, ಬಿಎಸ್‌-VIಗೆ ಮಾತ್ರ ಅನುಮತಿ : ದೆಹಲಿಯಲ್ಲಿ ಹಳೆಯ ಬಸ್‌ಗಳಿಗಿಲ್ಲ ಅವಕಾಶ

ನವದೆಹಲಿ: ಸರ್ಕಾರದ ನಿರ್ದೇಶನದಂತೆ ಇಂದಿನಿಂದ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಹಳೆಯ ಡೀಸೆಲ್ ಬಸ್‌ಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.ವಾಯುಮಾಲಿನ್ಯ ನಿಯಂತ್ರಿಸುವ ಸಲುವಾಗಿ ದೆಹಲಿ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ.ರಾಷ್ಟ್ರ ರಾಜದಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ತೀರಾ ಕಳಪೆಯಾಗಿದೆ. ವಾಯು ಗುಣಮಟ್ಟ ನಿರ್ವಹಣಾ ಸಮಿತಿಯು ನಗರಕ್ಕೆ ಬರುವ ರಾಸಾಯನಿಕಸಮೇತ ಹೊಗೆ ಸೂಸುವ ಬಸ್​​ಗಳಿಗೆ ಇದೀಗ ನಿರ್ಬಂಧ ಹೇರಿದೆ.

ಸಾರಿಗೆ ಇಲಾಖೆಯ ಪ್ರಕಾರ, ಮುಂದಿನ ವರ್ಷ ಜುಲೈ 1 ರಿಂದ ಯಾವುದೇ ನಗರದಿಂದ ದೆಹಲಿಗೆ ಬರುವ ಎಲ್ಲಾ ಬಸ್‌ಗಳು ಕೇವಲ ಎಲೆಕ್ಟ್ರಿಕ್, ಸಿಎನ್‌ಜಿ ಮತ್ತು ಬಿಎಸ್-VI ಡೀಸೆಲ್‌ ಇಂಧನ ಬಳಸಬೇಕು. ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ಯಾವುದೇ ನಗರ ಅಥವಾ ಪಟ್ಟಣದಿಂದ ಬರುವ ಪ್ರತಿಯೊಂದು ಬಸ್‌ಗಳಿಗೆ ಈ ನಿಯಮ ಅನ್ವಯಿಸುತ್ತದೆ.ವಾಹನಗಳಿಂದ ಹೊರಸೂಸುವ ಹೊಗೆ ಅಥವಾ ಕಾರ್ಬನ್​ ಡೈ ಆಕ್ಸೈಡ್​ ನಗರದ ವಾಯುಮಾಲಿನ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎನ್​ಜಿ ಬಸ್‌ಗಳು ಮತ್ತು ಎಲೆಕ್ಟ್ರಿಕ್​ ವಾಹನಗಳು ಮಾತ್ರ ಕಾರ್ಯನಿರ್ವಹಿಸಿದರೆ ಮಾಲಿನ್ಯ ಕಡಿಮೆ ಮಾಡಬಹುದು. ಹೀಗಾಗಿ ಸಾರಿಗೆ ಇಲಾಖೆ ವಾಹನಗಳ ನಿಷೇಧ ಮತ್ತು ಹೊಸ ನಿಯಮಗಳ ಕುರಿತು ನೆರೆ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ನವದೆಹಲಿಗೆ ಬರುವ ಎಲ್ಲಾ ಬಸ್‌ಗಳು ಎಲೆಕ್ಟ್ರಿಕ್, ಸಿಎನ್‌ಜಿ ಅಥವಾ ಬಿಎಸ್-6 ಡೀಸೆಲ್‌ನಲ್ಲಿ ಓಡಿಸುವಂತಿರಬೇಕು ಎಂದು ನಿಳಿಸಿದೆ.

ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಕಮಿಷನ್ (ಸಿಎಕ್ಯೂಎಂ) ನಿರ್ದೇಶನದ ಪ್ರಕಾರ, ಎಲೆಕ್ಟ್ರಿಕ್, ಸಿಎನ್‌ಜಿ ಮತ್ತು ಬಿಎಸ್-VI ಡೀಸೆಲ್ ಬಸ್‌ಗಳನ್ನು ದೆಹಲಿ ಮತ್ತು ಹರಿಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನದ ನಗರಗಳು ಮತ್ತು ಪಟ್ಟಣಗಳ ನಡುವೆ ನವೆಂಬರ್ 1ರಿಂದ ಎನ್‌ಸಿಆರ್‌ನಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು.

ಜನವರಿ 1, 2024ರಿಂದ ಹೊಸ ನಿಯಮ ಜಾರಿಗೆ ಬರುವಂತೆ ಎನ್‌ಸಿಆರ್ ಮತ್ತು ದೆಹಲಿಗೆ ಪ್ರವೇಶಿಸುವ ಬಸ್ ಎಲೆಕ್ಟ್ರಿಕ್, ಸಿಎನ್‌ಜಿ ಅಥವಾ ಬಿಎಸ್-VI ಡೀಸೆಲ್ ಬಸ್‌ಗಳೆಂದು ಬಸ್ ನಿರ್ವಾಹಕರು ಖಚಿತಪಡಿಸಿಕೊಳ್ಳಬೇಕು. ರಾಜ್ಯ ಪಿಎಸ್‌ಯು ಮತ್ತು ಖಾಸಗಿ ಸಂಸ್ಥೆಗಳು ನಿರ್ವಹಿಸುವ ಬಸ್ ಸೇವೆಗಳಿಗೆ ಈ ನಿಯಮ ಅನ್ವಯಿಸುತ್ತದೆ.

ರಾಜ್ಯದ ಎನ್‌ಸಿಆರ್ ಅಲ್ಲದ ಪ್ರದೇಶಗಳಿಂದ ದೆಹಲಿ ಮತ್ತು ಇತರ ರಾಜ್ಯಗಳ ಎನ್‌ಸಿಆರ್ ಪ್ರದೇಶಗಳ ನಡುವೆ ಕಾರ್ಯನಿರ್ವಹಿಸುವ ಎಲ್ಲಾ 1,433 ರಾಜ್ಯ ಸರ್ಕಾರಿ ಬಸ್‌ಗಳು 2024 ಜುಲೈ 1 ರಿಂದ ಬಿಎಸ್-VI ಡೀಸೆಲ್ ಕಂಪ್ಲೈಂಟ್ ಬಸ್‌ಗಳಾಗಿ ಬದಲಾಯಿಸಲಾಗುವುದು. ರಾಜ್ಯ PSUಗಳು ಮತ್ತು ಖಾಸಗಿ ಸಂಸ್ಥೆಗಳು ಸೇರಿದಂತೆ ಇತರೆ ವಲಯಗಳು ನಿರ್ವಹಿಸಲ್ಪಡುವ ಬಸ್ ಸೇವೆಗಳಿಗೆ ಸಹ ಈ ನಿಯಮ ಅನ್ವಯಿಸುತ್ತದೆ.
ದೆಹಲಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಡೀಸೆಲ್-ಚಾಲಿತ ಬಸ್‌ಗಳಿಂದ ಉಂಟಾಗುವ ವಾಯು ಮಾಲಿನ್ಯ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆ ಮಾಡುವ ಅಂತಿಮ ಗುರಿ ಹೊಂದಲಾಗಿದೆ. ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ಸಾರಿಗೆ ಇಲಾಖೆಯು ವಿವರವಾದ ಮಾರ್ಗಸೂಚಿಗಳು ಮತ್ತು ಉದ್ದೇಶಗಳನ್ನು ಸೂಚಿಸಿದೆ ಎಂದು ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಕಮಿಷನ್ ತಿಳಿಸಿದೆ.

ಭಾರತ್ ಸ್ಟೇಜ್ (BS) ಭಾರತದಲ್ಲಿ ವಾಹನಗಳು ಹೊರಸೂಸಬಹುದಾದ ಕಾರ್ಬನ್ ಮಾನಾಕ್ಸೈಡ್ ಮತ್ತು ಕಣಗಳಂತಹ ವಾಯು ಮಾಲಿನ್ಯಕಾರಕಗಳ ಪ್ರಮಾಣದ ಮೇಲೆ ಅನುಮತಿಸುವ ಕಾನೂನು ಹೊರಸೂಸುವಿಕೆಯ ಮಿತಿಗಳ ವಿವಿಧ ಹಂತಗಳನ್ನು ಇದು ಗುರುತಿಸುತ್ತದೆ. ಇವುಗಳು ಹೊರಸೂಸುವಿಕೆ ನಿಯಂತ್ರಣ, ಇಂಧನ ದಕ್ಷತೆ ಮತ್ತು ಎಂಜಿನ್ ವಿನ್ಯಾಸವನ್ನು ಸುಧಾರಿಸುವ ಗುರಿ ಹೊಂದಿವೆ. ವಾಹನ ತಯಾರಕರು ಈ ಹೊಸ ಮಾನದಂಡಗಳನ್ನು ಪೂರೈಸುವ ವಾಹನಗಳನ್ನು ತಯಾರಿಸಿದರೆ ತೈಲ ಕಂಪನಿಗಳು ವಿಶ್ವದ ಶುದ್ಧ ಇಂಧನ ಎಂದು ಕರೆಯಲ್ಪಡುವ BS-VI ಮಾನದಂಡಗಳಿಗೆ ಬದ್ಧವಾಗಿರುವ ಇಂಧನ ಪೂರೈಸುತ್ತವೆ.ದಂಡ: ರಾಜಧಾನಿಗೆ ಬರುವ ಬಸ್‌ಗಳು ನಿಯಮಾವಳಿಗಳನ್ನು ಅನುಸರಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲು ವಿವಿಧ ಗಡಿಯಲ್ಲಿ ತಪಾಸಣೆಗಾಗಿ ತಂಡ ನಿಯೋಜಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ದಂಡ ಹಾಕಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.