ಉಡುಪಿ: ತುಳುನಾಡಿನಲ್ಲಿ ನಾವು ಆಚರಿಸುವ ಸಂಸ್ಕೃತಿ, ಸಂಪ್ರದಾಯಗಳು ಬಹಳ ವೈಶಿಷ್ಟ್ಯತೆ ಹೊಂದಿವೆ. ಈ ವಿಶಿಷ್ಟ ಸಂಸ್ಕೃತಿ ದೇಶದ ಬೇರೆಲ್ಲೂ ಕಾಣಸಿಗದು. ಆದರೆ
ನಮ್ಮದೇ ಕೆಲವೊಂದು ತಪ್ಪಿನಿಂದ ತುಳು ಸಂಸ್ಕೃತಿ ಅವನತಿಯ ಕಡೆಗೆ ಸಾಗುತ್ತಿದೆ ಎಂದು ನಿವೃತ್ತ ಸೈನಿಕ ಶಿಕ್ಷಕಿ ತುಳಸಿ ದೇವಾಡಿಗ ಕಟಪಾಡಿ ಹೇಳಿದರು.
ತುಳುಕೂಟ ಉಡುಪಿ ವತಿಯಿಂದ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ ಮದರೆಂಗಿದ ರಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳುನಾಡಿನ ಹಿಂದಿನ ಸಂಸ್ಕೃತಿ ಹಾಗೂ ಈಗಿನ ಸಂಸ್ಕೃತಿಯಲ್ಲಿ ಬಹಳಷ್ಟು
ವ್ಯಾತ್ಯಾಸಗಳಾಗಿವೆ. ತುಳುವರ ಹಿಂದಿನ ಕಲೆ, ಸಂಸ್ಕೃತಿ ಹಾಗೂ ಗ್ರಾಮೀಣ ಕ್ರೀಡೆಗಳು
ಸಂಪೂರ್ಣ ನಾಶ ಆಗಿದೆ. ಆಹಾರ ಸೇರಿದಂತೆ ಪ್ರತಿಯೊಂದರಲ್ಲೂ ಇಂದು ನಾವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿದ್ದೇವೆ. ಇದು ತುಳು ಸಂಸ್ಕೃತಿಯ ಅವನತಿಗೆ ಕಾರಣ. ತುಳು ಭಾಷೆ, ಸಂಸ್ಕೃತಿಯನ್ನು ನಾವು ಯಾವತ್ತಿಗೂ ಮರೆಯಬಾರದು. ಅದರಲ್ಲಿ ಇರುವಷ್ಟು ವಿಚಾರ, ವೈಭೋಗವನ್ನು ಬೇರ್‍ಯಾವುದೇ ಸಂಸ್ಕೃತಿಯಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ಉಡುಪಿ ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳು
ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ತುಳುವರ
ಕರ್ತವ್ಯ. ತುಳುನಾಡಿನ ಋಣ ನಮ್ಮ ಮೇಲಿದೆ. ಹಾಗಾಗಿ ನಾವು ತುಳು ಸಂಸ್ಕೃತಿಯ ರಕ್ಷಣೆಗೆ ಸದಾ ಕಾರ್ಯಪ್ರವೃತ್ತರಾಗಬೇಕು. ಈ ಹಿನ್ನೆಲೆಯಲ್ಲಿ ತುಳುಕೂಟವು ಹಲವಾರು
ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ವೈ.ಎನ್. ಶೆಟ್ಟಿ ಹಾಗೂ ಪತ್ರಕರ್ತ
ಶ್ರೀಕಾಂತ್ ಶೆಟ್ಟಿ ಮಾತನಾಡಿದರು. ತುಳುಕೂಟದ ಅಧ್ಯಕ್ಷ ವಿ.ಜಿ. ಶೆಟ್ಟಿ ಅಧ್ಯಕ್ಷತೆ
ವಹಿಸಿದ್ದರು.
ಉಡುಪಿ ಧರ್ಮಪ್ರಾಂತ್ಯದ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾನೆಟ್ ಬರ್ಬೋಜಾ,
ಅನುಪಮ ಮಹಿಳಾ ಮಾಸಿಕ ಪತ್ರಿಕೆಯ ಸಂಪಾದಕಿ ಕುಲ್‌ಸೂಮ್ ಅಬೂಬಕ್ಕರ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉಡುಪಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಎಂ.ಜಿ. ಚೈತನ್ಯ, ಉಪಾಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರು, ವೀಣಾ ಶೆಟ್ಟಿ, ವಿದ್ಯಾ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಜ್ಯೋತಿ ಎಸ್. ದೇವಾಡಿಗ ಸ್ವಾಗತಿಸಿದರು. ಯಶೋದ ಕೇಶವ್ ಕಾರ್ಯಕ್ರಮ ನಿರೂಪಿಸಿದರು.