ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 72 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 348 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದತ್ತಾಂಶವನ್ನು ಬಿಡುಗಡೆ ಮಾಡಿದೆ.ಕೋವಿಡ್ ಹೊಸ ರೂಪಾಂತಾರಿ ತಳಿಗಳಿಂದಾಗಿ ಭಾರತ ಸೇರಿದಂತೆ ಹಲವು ದೇಶದಲ್ಲಿ ಸೋಂಕಿನ ಪ್ರಕರಣಗಳ ಏರಿಕೆ ಕಾಣುತ್ತಿವೆ.
ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಕೋವಿಡ್ನ ಹೊಸ ಉಪತಳಿಗಳಾದ ಏರಿಸ್, ಎಕ್ಸ್ಬಿಬಿ ಸೇರಿದಂತೆ ಹಲವು ತಳಿಗಳು ಹೊಸ ಸೋಂಕಿನ ಪ್ರಕರಣಗಳಿಗೆ ಕಾರಣವಾಗಿದೆ. ಈ ಸೋಂಕುಗಳಿಂದ ಪ್ರಕರಣಗಳು ದಾಖಲಾಗುತ್ತಿದ್ದರೂ, ಯಾವುದೇ ಅಪಾಯ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಬೂಸ್ಟರ್ ಡೋಸ್ ಪಡೆಯುವುದು ಅಗತ್ಯ. ಅದರಲ್ಲೂ ವೃದ್ಧರು ಮತ್ತು ಮಕ್ಕಳು ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆ ಹೊಂದಿರುವವರ ಮೇಲ್ವಿಚಾರಣೆಗೆ ಹೆಚ್ಚಿನ ಗಮನ ನೀಡುವಂತೆ ತಜ್ಞರು ಕರೆ ನೀಡಿದ್ದಾರೆ.
ಕೋವಿಡ್ನಿಂದ 5 ಲಕ್ಷದ 32 ಸಾವಿರದ 35 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ ಎಂದು ಬುಧವಾರ ಬೆಳಗ್ಗೆ ಸಚಿವಾಲಯ ಹೊಸ ಮಾಹಿತಿ ಹಂಚಿಕೊಂಡಿದೆ. ಸದ್ಯ ದೇಶದಲ್ಲಿ ಕೋವಿಡ್ ಆರಂಭವಾದಾಗಿನಿಂದ 4 ಕೋಟಿ 49 ಲಕ್ಷ ಪ್ರಕರಣಗಳು ಒಟ್ಟಾರೆಯಾಗಿ ದಾಖಲಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4.44 ಕೋಟಿ ಆಗಿದ್ದು, ಚೇತರಿಕೆಯ ದರ ಶೇ 98.81 ಆಗಿದೆ. ಸಚಿವಾಲಯದ ವೆಬ್ಸೈಟ್ ಅನುಸಾರ ಇಲ್ಲಿಯವರೆಗೆ 220.67 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
ಇದು ಎಕ್ಸ್ಬಿಬಿ.1.16 ಸ್ಟ್ರೈನ್ ರೂಪಾಂತರಕ್ಕಿಂತ ಶೇ 95 ಪ್ರತಿಶತ ಹೆಚ್ಚು ಹರಡುವ ಸಾಧ್ಯತೆಯಿದೆ. ಈ ಹಿನ್ನಲೆ ತಜ್ಞರು ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಮತ್ತೆ ನಿಧಾನವಾಗಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಜಾಗ್ರತೆ ವಹಿಸಬೇಕಾದ ಅಗತ್ಯ ಇದೆ.ಸಿಂಗಾಪೂರ್, ಹಾಂಕಾಂಗ್, ಅಮೆರಿಕದಲ್ಲಿ ಏರಿಕೆ: ಇತರ ದೇಶಗಳಿಗೆ ಹೋಲಿಕೆ ಮಾಡಿದಾಗ ಹೊಸ ತಳಿಯ ಕೋವಿಡ್ ಪ್ರಕರಣಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಭಾರತದಲ್ಲಿ ಕಡಿಮೆ ಇದೆ. ಸಿಂಗಾಪುರ, ಹಾಂಕಾಂಗ್ ಸೇರಿದಂತೆ ಹಲವೆಡೆ ಕೋವಿಡ್ನ ರೂಪಾಂತರ ತಳಿಗಳಾದ ಎಕ್ಸ್ಬಿಬಿ, ಎರಿಸ್, ಬಿಎ.2.86 ಸೋಂಕಿಗೆ ಕಾರಣವಾಗುತ್ತಿದೆ. ಈ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಿದೆ. ಇವರಲ್ಲಿ ಸೋಂಕಿನ ಸೌಮ್ಯ ಲಕ್ಷಣ ಕಾಣಿಸಿಕೊಂಡಿದ್ದು, ಇದು ಅಪಾಯಕಾರಿಯಾಗಿಲ್ಲ ಎಂದು ವರದಿಗಳು ತಿಳಿಸಿದೆ. ಆದಾಗ್ಯೂ ಅಧಿಕಾರಿಗಳು ಮತ್ತು ತಜ್ಞರು ಬೂಸ್ಟರ್ ಡೋಸ್ ಪಡೆಯುವಂತೆ ಒತ್ತು ನೀಡಿದ್ದು, ಕೋವಿಡ್ ನಿಯಮವಾಳಿ ಪಾಲನೆ ಮಾಡುವಂತೆ ಸೂಚಿಸಿದ್ದಾರೆ.












