ಕಚ್ಚಾ ತೈಲ ಬೆಲೆ ಏರಿಕೆ : ಇಸ್ರೇಲ್ – ಗಾಜಾ ಸಮರದ ಎಫೆಕ್ಟ್​

ನವದೆಹಲಿ: ಇಸ್ರೇಲ್ ಮತ್ತು ಗಾಜಾದಲ್ಲಿ ಯುದ್ಧ ಪರಿಸ್ಥಿತಿಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ತೈಲ ಉತ್ಪಾದನೆಗೆ ಅಡ್ಡಿಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಗಳು ಸೋಮವಾರ ಶೇಕಡಾ 4 ರಷ್ಟು ಏರಿಕೆಯಾಗಿವೆ.ಅಮೆರಿಕದ ತೈಲ ಬೆಲೆಯ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (ಡಬ್ಲ್ಯುಟಿಐ) ಬ್ಯಾರೆಲ್​ಗೆ 86 ಡಾಲರ್​ಗಿಂತ ಹೆಚ್ಚಾಗಿದೆ. ಹಾಗೆಯೇ ಬ್ರೆಂಟ್ ಕ್ರೂಡ್​ ತೈಲದ ಬೆಲೆಯೂ ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ ಸ್ಥಿತಿಯು ತೈಲ ಬೆಲೆಗಳ ಏರಿಕೆಗೆ ಕಾರಣವಾಗಬಹುದು ಎಂಬ ಆತಂಕ ಮೂಡಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳು ದಾಳಿಯನ್ನು ಖಂಡಿಸಿವೆ. ತಾನು ನಡೆಸಿದ ದಾಳಿಗೆ ಇರಾನ್​ ನೇರ ಬೆಂಬಲ ನೀಡಿದೆ ಎಂದು ಈ ಮಧ್ಯೆ ಹಮಾಸ್ ಹೇಳಿಕೊಂಡಿರುವುದು ಗಮನಾರ್ಹ. ನ್ಯೂಯಾರ್ಕ್​ನಲ್ಲಿ ಭಾನುವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಇರಾನ್ ದಾಳಿಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದೆ. ಆದರೆ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಈ ದಾಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಪ್ರದೇಶಗಳು ತೈಲ ಉತ್ಪಾದಕ ಪ್ರದೇಶಗಳಲ್ಲವಾದರೂ ಮಧ್ಯಪ್ರಾಚ್ಯ ಪ್ರದೇಶವು ಜಾಗತಿಕ ತೈಲ ಬೇಡಿಕೆಯ ಮೂರನೇ ಒಂದು ಭಾಗದಷ್ಟು ತೈಲವನ್ನು ಪೂರೈಸುತ್ತದೆ. ಮೂರು ದಿನಗಳ ಹಿಂದೆ ಹಮಾಸ್​ ಉಗ್ರಗಾಮಿ ಗುಂಪು ಇಸ್ರೇಲ್ ಮೇಲೆ ನಡೆಸಿದ ದಾಳಿಯು ಕಳೆದ ಒಂದು ದಶಕದಲ್ಲಿಯೇ ಅತಿದೊಡ್ಡ ದಾಳಿಯಾಗಿದೆ. ಇದರಿಂದ ಎರಡೂ ಪ್ರದೇಶಗಳ ಮಧ್ಯೆ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖ ತೈಲ ವ್ಯಾಪಾರ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ಸರಬರಾಜಾಗುವ ತೈಲ ಪೂರೈಕೆಗೆ ಅಡ್ಡಿಯಾದರೆ ಜಾಗತಿಕ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲ ಪೂರೈಕೆ ನಿಲ್ಲಲಿದೆ ಎಂದು ಕವೊನಿಕ್ ಹೇಳಿದರು. ಗಲ್ಫ್ ಪ್ರದೇಶದ ಪ್ರಮುಖ ತೈಲ ರಫ್ತುದಾರರು ಹಾರ್ಮುಜ್ ಜಲಸಂಧಿಯ ಮೂಲಕವೇ ಜಗತ್ತಿನ ಇತರ ರಾಷ್ಟ್ರಗಳಿಗೆ ತೈಲ ಪೂರೈಕೆಯಾಗುತ್ತದೆ. ಒಟ್ಟಾರೆಯಾಗಿ ಪ್ರಸ್ತುತ ನಿರ್ಮಾಣವಾಗಿರುವ ಅನಿಶ್ಚಿತ ಪರಿಸ್ಥಿತಿಗಳು ಮುಂದಿನ ದಿನಗಳಲ್ಲಿ ತೈಲ ಬೆಲೆಗಳ ಏರಿಕೆಗೆ ಕಾರಣವಾಗಬಹುದು ಎನ್ನುತ್ತಾರೆ ವಿಶ್ಲೇಷಕರು.(ಐಎಎನ್​ಎಸ್​)”ಯುದ್ಧ ಪರಿಸ್ಥಿತಿಯು ಇರಾನ್ ಮತ್ತು ಸೌದಿ ಅರೇಬಿಯಾದಂತಹ ಪ್ರಮುಖ ತೈಲ ಉತ್ಪಾದಿಸುವ ದೇಶಗಳಿಗೆ ವ್ಯಾಪಕವಾಗಿ ಹರಡುವ ಸಾಧ್ಯತೆಗಳಿರುವುದರಿಂದ ತೈಲೋತ್ಪಾದನೆಯ ಮೇಲೆ ಪರಿಣಾಮವಾಗುವ ನಿರೀಕ್ಷೆಯಿದೆ” ಎಂದು ಇಂಧನ ವಿಶ್ಲೇಷಕ ಸೌಲ್ ಕವೊನಿಕ್ ಮಾಧ್ಯಮಗಳಿಗೆ ತಿಳಿಸಿದರು. “ಹಮಾಸ್ ದಾಳಿಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿರುವ ಇರಾನ್​ ಯುದ್ಧದಲ್ಲಿ ತೊಡಗಿಸಿಕೊಂಡರೆ ಜಾಗತಿಕ ತೈಲ ಸರಬರಾಜಿನ ಶೇಕಡಾ 3 ರಷ್ಟು ತೈಲ ಪೂರೈಕೆಗೆ ಅಡ್ಡಿಯಾಗಲಿದೆ” ಎಂದು ಅವರು ಹೇಳಿದರು.