ಚೆನ್ನೈ (ತಮಿಳುನಾಡು): ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಇಂದು ತನ್ನ ಮೊದಲ ಪಂದ್ಯವನ್ನು ಆಸ್ಪ್ರೇಲಿಯಾ ವಿರುದ್ಧ ಆಡುತ್ತಿದೆ.ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾಕ್ಕೆ ಹೊಸ ಬಾಲ್ನಲ್ಲಿ ಬುಮ್ರಾ ಆರಂಭಿಕ ಆಘಾತವನ್ನು ನೀಡಿದರೆ, ನಂತರ ಪಿಚ್ಗೆ ಸೆಟ್ ಆಗಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ವಾರ್ನರ್ನ್ನು ಕುಲ್ದೀಪ್ ಕಾಡಿದರು. ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಐದನೇ ಪಂದ್ಯದಲ್ಲಿ ಇಂದು ಭಾರತ ಹಾಗೂ ಆಸ್ಪ್ರೇಲಿಯಾ ಮುಖಾಮುಖಿಯಾಗಿವೆ.
5 ರನ್ ಗಳಿಸಿದ್ದ ಆಸ್ಟ್ರೇಲಿಯಾಕ್ಕೆ ಬುಮ್ರಾ ಶಾಕ್ ಕೊಟ್ಟರು. ನಂತರ ಎರಡನೇ ವಿಕೆಟ್ ವಾರ್ನರ್ ಮತ್ತು ಸ್ಮಿತ್ ತಮ್ಮ ಅನುಭವದ ಮೂಲಕ ಭಾರತೀಯ ಸ್ಪಿನ್ ಹಾಗೂ ಸ್ಪೀಡ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಎರಡನೇ ವಿಕೆಟ್ಗೆ ಈ ಜೋಡಿ 69 ರನ್ ಜೊತೆಯಾಟವನ್ನು ಮಾಡಿತು. 52 ಬಾಲ್ ಎದುರಿಸಿದ 6 ಬೌಂಡರಿಯಿಂದ 41 ರನ್ ಗಳಿಸಿದ್ದ ವಾರ್ನರ್ ವಿಕೆಟ್ನಿಂದ ಪಾಲುದಾರಿಕೆ ಅಂತ್ಯವಾಯಿತು.ಪಂದ್ಯದ ಮೂರನೇ ಓವರ್ನಲ್ಲಿ ಸ್ಲಿಪ್ ಕ್ಯಾಚ್ ಕೊಟ್ಟು ಮಾರ್ಷ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 17ನೇ ಓವರ್ನಲ್ಲಿ ಕುಲ್ದೀಪ್ ಬಾಲ್ನಲ್ಲಿ ಬೌಲರ್ಗೆ ಕ್ಯಾಚ್ ಕೊಟ್ಟು 41 ರನ್ ಗಳಿಸಿದ್ದ ವಾರ್ನರ್ ಔಟ್ ಆದರು. ಕ್ರೀಸ್ನಲ್ಲಿ ಮಾರ್ನಸ್ ಲಬುಶೇನ್ ಮತ್ತು ಸ್ಮಿತ್ ಜೊತೆಯಾಟ ಮುಂದುವರೆದಿದ್ದು, 25 ಓವರ್ಗೆ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 102 ರನ್ ಕಲೆಹಾಕಿದೆ.
ಉಭಯ ತಂಡಗಳ ಮಾಹಿತಿ ಇಂತಿದೆ:
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಆಯಡಮ್ ಝಂಪಾ
ಭಾರತ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ವಾರ್ನರ್ ದಾಖಲೆ: ಏಕದಿನ ವಿಶ್ವಕಪ್ನಲ್ಲಿ 19 ಪಂದ್ಯದಿಂದ 1000 ರನ್ ಗಡಿ ಮುಟ್ಟಿದ ದಾಖಲೆಯನ್ನು ವಾರ್ನರ್ ಚೆಪಾಕ್ ಪಂದ್ಯದಲ್ಲಿ ಮಾಡಿದ್ದಾರೆ. ಕಡಿಮೆ ಪಂದ್ಯದಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ಖ್ಯಾತಿಯೂ ಅವರ ಪಾಲಿನದ್ದಾಗಿದೆ. 20 ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್, ಎಬಿ ಡಿವಿಲಿಯರ್ಸ್, 21 ಪಂದ್ಯಗಳಲ್ಲಿ ವಿವಿ ರಿಚರ್ಡ್ಸ್, ಸೌರವ್ ಗಂಗೂಲಿ ಈ ಸಾಧನೆಯನ್ನು ಮಾಡಿದ್ದಾರೆ.












