ಉಡುಪಿ, ಜುಲೈ 11: ಮಹಿಳೆಯರು ಜನ ಜನಸಂಖ್ಯಾ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಿದರೆ ಕಾರ್ಯಕ್ರಮದ ಉದ್ದೇಶ ಉತ್ತಮ ಫಲಿತಾಂಶ ಪಡೆಯಬಹುದು. ಆರೋಗ್ಯ ಇಲಾಖೆಯಿಂದ ನಡೆಯುವ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಎಲ್ಲರೂ ತೊಡಗಿಸಿಕೊಂಡು ಜನ ಸಂಖ್ಯಾ ನಿಯಂತ್ರಣದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕರೆ ನೀಡಿದ್ದಾರೆ.
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಎನ್‍ಎಸ್‍ಎಸ್ ಘಟಕ ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಉಡುಪಿ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ “ಕುಟುಂಬ ಕಲ್ಯಾಣ ನಿಭಾಯಿಸುವ ಜವಬ್ದಾರಿ, ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ” ಎಂಬ ಘೋಷ ವಾಕ್ಯದಡಿಯಲ್ಲಿ ಉಡುಪಿ ಅಜ್ಜರಕಾಡುವಿನ ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನರಲ್ಲಿ ಆರಿವು ಮೂಡಿಸುವುದು ಜನ ಸಂಖ್ಯಾ ದಿನಾಚರಣೆ ಉದ್ದೇಶವಾಗಿದೆ. ಕಾಡನ್ನು ಕಡಿದು ವನ್ಯ ಸಂಪತ್ತನ್ನು ನಾಶ ಮಾಡುತ್ತಿರುವ ಪರಿಣಾಮ ಮಳೆ ಕಡಿಮೆ ಆಗಿದೆ. ಹಿಂದೆ ಇದ್ದಂತಹ ಅವಿಭಕ್ತ ಕುಟುಂಬ ಪದ್ದತಿ ಇಂದು ನಶಿಸುತ್ತಿದೆ. ದೇಶದಲ್ಲಿರುವ ಯುವ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ಮಿತವಾದ ಪ್ರಮಾಣದಲ್ಲಿ ಜನಸಂಖ್ಯೆ ಇದ್ದರೆ ಸರಕಾರದಿಂದ ಕೊಡಮಾಡುವ ಸವಲತ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಹಂಚಿಕೆ ಮಾಡಿ ದೇಶ ಪ್ರಗತಿ ಪಥದಲ್ಲಿ ಸಾಗಲು ಸಹಕಾರಿಯಾಗುತ್ತದೆ. ಶಿಕ್ಷಣ ಪಡೆದ ಯುವಕ ಯುವತಿಯರು ಜಾಗೃತರಾಗಿದ್ದು, ಮುಂದಿನ ದಿನಗಳಲ್ಲಿ ಜನಸಂಖ್ಯಾ ದಿನಾಚರಣೆಯ ಯೋಜನೆ ಫಲಕಾರಿಯಾಗುತ್ತದೆ. ದೇಶ ಜನ ಸಂಖ್ಯೆಯಲ್ಲಿದ್ದರೂ ಬಡತನದ ಕಗ್ಗಂಟು ನಮ್ಮ ದೇಶದಲ್ಲಿ ಇಲ್ಲ. ಅಭಿವೃದ್ಧಿಯಲ್ಲಿ ಪ್ರಗತಿಯನ್ನು ಸಾಧಿಸುತ್ತಾ ಇತರ ದೇಶಗಳು ನಮ್ಮ ದೇಶವನ್ನು ಗುರುತಿಸುವಂತಾಗಿದೆ. ತಂದೆ ತಾಯಿಯರನ್ನು, ಹಿರಿಯರನ್ನು ನಿರ್ಲಕ್ಷ್ಯ ಮಾಡದೆ ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಉತ್ತಮ ಆರೋಗ್ಯ, ಶಿಕ್ಷಣ, ಜೀವನ ಹೊಂದಬೇಕಾದರೆ ಒಂದು ಕುಟುಂಬದಲ್ಲಿ ಒಂದರಿಂದ ಎರಡು ಮಕ್ಕಳಿರಬೇಕು. ವಿದ್ಯಾರ್ಥಿಗಳು ಸಾಧಕರ ಜೀವನ ಚರಿತ್ರೆಗಳನ್ನು ಓದುವ ಮೂಲಕ ಅವರ ಆಲೋಚನಾ ಧಾರೆಗಳನ್ನು ಉದ್ವೀಪನಗೊಳಿಸಬೇಕು. ವಿದ್ಯಾರ್ಥಿಗಳು ದುಷ್ಚಟಗಳ ದಾಸರಾಗದೆ ದೇಶದ ಬಲಿಷ್ಟ ಪ್ರಜೆಗಳಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಮಾತನಾಡಿ, ಜನ ಸಂಖ್ಯೆ, ನೀರು, ಪರಿಸರ, ಆರೋಗ್ಯ ಕುರಿತು ಅರಿವು ಮತ್ತು ಜಾಗೃತಿ ಹೊಂದಿರುವುದು ಅತ್ಯಂತ ಅಗತ್ಯ. ಸಶಕ್ತ ದೇಶ ಕಟ್ಟುವ ವಿಚಾರದಲ್ಲಿ ಯುವ ಜನತೆಗೆ ತಮ್ಮ ಪಾತ್ರದ ಬಗ್ಗೆ ಅರಿವು ಇರಬೇಕು. ದೇಶದಲ್ಲಿರುವ ಜನಸಂಖ್ಯೆಯನ್ನು ಉತ್ಪಾದಕ ಜನ ಸಂಖ್ಯೆಯಾಗಿ ರೂಪಿಸಿ ದೇಶದ ಪ್ರಗತಿಗೆ ಬಳಸಿಕೊಳ್ಳಬೇಕು. ದೇಶ ಪ್ರೇಮವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸ್ವಯಂ ಪ್ರೇರಿತವಾಗಿ ಪರಿಸರ ಕಾಳಜಿಯ ಭಾವನೆಯನ್ನು ಬೆಳೆಸಿಕೊಂಡಾಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಜನ ಸಂಖ್ಯಾ ದಿನಾಚರಣೆಯ ಕರಪತ್ರ ಬಿಡುಗಡೆಗೊಳಿಸಿದರು. ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜನಸಂಖ್ಯಾ ಸ್ಪೋಟದ ಕುರಿತು ಕಿರು ನಾಟಕವನ್ನು ಪ್ರದರ್ಶಿಸಲಾಯಿತು.
ಕರ್ನಾಟಕ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಡಾ. ರಾಜೇಂದ್ರ ಕೆ. ಉಪಸ್ಥಿತರಿದ್ದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮ್ ರಾವ್ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ ಜಿ ರಾಮ ಸ್ವಾಗತಿಸಿದರು, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿಜಯ ಬಾಯಿ ಹಾಗೂ ವಿದ್ಯಾರ್ಥಿನಿ ವಸುಧಾ ಕಾರ್ಯಕ್ರಮ ನಿರೂಪಿಸಿದರು, ಆರೋಗ್ಯ ಮೇಲ್ವಿಚಾರಕ ಆನಂದ ಗೌಡ ವಂದಿಸಿದರು.