ಸಚಿವ ಭೈರತಿ ಸುರೇಶ್: ರಾಜ್ಯಾದ್ಯಂತ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ಆರಂಭ

ಬೆಳಗಾವಿ : ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್​ ತಿಳಿಸಿದ್ದಾರೆ. ‘ರಾಜ್ಯದಲ್ಲಿ ಮತ್ತಷ್ಟು ಇಂದಿರಾ ಕ್ಯಾಂಟೀನ್ ಆರಂಭ’ ಸಚಿವ ಭೈರತಿ ಸುರೇಶ್ ಅವರು ಶುಕ್ರವಾರ ಬೆಳಗಾವಿಯಲ್ಲಿ ಇಂದಿರಾ ಕ್ಯಾಂಟೀನ್​ಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಇಂದಿರಾ ಕ್ಯಾಂಟೀನ್​ ತುಂಬಾ ಸಂಕಷ್ಟದಲ್ಲಿವೆ ಎಂಬ ಪ್ರಶ್ನೆಗೆ, “ಹಿಂದಿನ ಬಿಜೆಪಿ ಸರ್ಕಾರ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಗೆ ಕೆಟ್ಟ ಹೆಸರು ತರಲು ಸರಿಯಾಗಿ ನಿರ್ವಹಣೆ ಮಾಡದೇ ಕ್ಯಾಂಟೀನ್​ಗಳನ್ನು ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ಕ್ಯಾಂಟೀನ್​ಗಳ ಪುನಶ್ಚೇತನಕ್ಕೆ 240 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಪ್ರಾದೇಶಿಕವಾಗಿ ಬೆಳಗಾವಿ ಭಾಗದಲ್ಲಿ ರೊಟ್ಟಿ ಊಟ, ಮೈಸೂರು ಭಾಗದಲ್ಲಿ ರಾಗಿ ಮುದ್ದೆ, ಬೆಂಗಳೂರಿನಲ್ಲಿ ಅನ್ನ, ಇಡ್ಲಿ ವಿತರಿಸುವ ಮೆನು ಸಿದ್ಧಪಡಿಸಿ ಜಾರಿಗೊಳಿಸುತ್ತೇವೆ. ಈಗಾಗಲೇ ಇಡೀ 24 ಜಿಲ್ಲೆಯಲ್ಲಿ ಸಮೀಕ್ಷೆಯಾಗಿದ್ದು ಸಭೆ ನಡೆಸಿದ್ದೇವೆ” ಎಂದರು.ಬೆಳಗಾವಿಯಲ್ಲಿಂದು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ನಾಲಾಯಕ್ ಎಂಬ ಬಿಜೆಪಿ ಶಾಸಕ ಯತ್ನಾಳ್​ ಹೇಳಿಕೆ ವಿಚಾರಕ್ಕೆ, “ಇಡೀ ಪ್ರಪಂಚ, ದೇಶ, ರಾಜ್ಯಕ್ಕೆ ಸಿದ್ದರಾಮಯ್ಯ ಎಂತಹ ಲಾಯಕ್ ವ್ಯಕ್ತಿ ಅಂತಾ ತಿಳಿದಿದೆ. ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂಬುದೂ ಎಲ್ಲರಿಗೂ ಗೊತ್ತಿದೆ. ಬಿಜೆಪಿಯಂಥ ನಾಲಾಯಕರಿಗೆ ಉತ್ತರಿಸುವ ಅಗತ್ಯವಿಲ್ಲ” ಎಂದು ಭೈರತಿ ಸುರೇಶ್​ ತಿರುಗೇಟು ಕೊಟ್ಟರು.

ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಶಾಸಕ ಆಸೀಫ್ ಸೇಠ್ ಇದ್ದರು.”ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ಪತ್ರಗಳನ್ನು ಈಗಾಗಲೇ ನಾನು ಮತ್ತು ಸಚಿವ ರಹೀಂ ಖಾನ್ ವಿತರಿಸುತ್ತಿದ್ದೇವೆ. ಎಲ್ಲೆಲ್ಲಿ ಕಡಿಮೆ ಇದ್ದಾರೋ, ಅಲ್ಲೆಲ್ಲಾ ಪೌರಕಾರ್ಮಿಕರನ್ನು ತುಂಬಿಕೊಳ್ಳುತ್ತೇವೆ. ಇರುವ ಪೌರಕಾರ್ಮಿಕರಿಗೆ ಮನೆ ಕಟ್ಟಿ ಕೊಡುವುದು, ಮೂಲಭೂತ ಸೌಕರ್ಯ, ಆರೋಗ್ಯ ಮತ್ತು ಅವರ ಮಕ್ಕಳಿಗೆ ಶಿಕ್ಷಣ ಸೇರಿ ಎಲ್ಲ ಸೌಲಭ್ಯಗಳನ್ನೂ ಒದಗಿಸುತ್ತೇವೆ” ಎಂದು ಭೈರತಿ ಸುರೇಶ್​ ಭರವಸೆ ನೀಡಿದರು.