ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಮಂಗಳವಾರದಿಂದ ಕರಾವಳಿಯಾದ್ಯಂತ ಧಾರಕಾರ ಮಳೆಯಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಮಳೆ ಬಿರುಸಾದ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಪುತ್ತೂರು ಹಾಗೂ ಮೂಡಬಿದಿರೆ ಭಾಗಗಳಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಮಂಗಳೂರಿನ ಹೊರವಲಯ ಆಕಾಶಭವನದಲ್ಲಿ ಭೂಕುಸಿತ ಉಂಟಾಗಿ ಮನೆಗೆ ಹಾನಿಯಾಗಿದೆ.
ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಶಾಲಾ ಶೌಚಾಲಯ ಕಟ್ಟಡದ ಮೇಲೆ ಮರಬಿದ್ದು, ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಅಲ್ಲದೇ ಮಳೆಯಿಂದಾಗಿ ಸುಬ್ರಹ್ಮಣ್ಯದ ಹತ್ತಿರ ಸಿರಿಬಾಗಿಲು ಎಂಬಲ್ಲಿ ರೈಲ್ವೇ ಹಳಿ ಮೇಲೆ ಗುಡ್ಡ ಕುಸಿದು ಮಣ್ಣು ಬಿದ್ದ ಪರಿಣಾಮವಾಗಿ ಬೆಂಗಳೂರು ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದ್ದು, ಎರಡು ದಿನ ರೈಲು ಮಾರ್ಗ ಬಂದ್ ಆಗುವ ಸಾಧ್ಯತೆ ಇದೆ.