ದ.ಕ. ಜಿಲ್ಲೆಯಲ್ಲಿ ದಲಿತ ವಿದ್ಯಾರ್ಥಿಗಳ ಸರಣಿ  ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಉಡುಪಿ: ಇತ್ತೀಚೆಗೆ‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ದಲಿತ ವಿದ್ಯಾರ್ಥಿಗಳ ಸರಣಿ ಅತ್ಯಾಚಾರ ಖಂಡಿಸಿ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ
ಆಗ್ರಹಿಸಿ ಉಡುಪಿ ಅಂಬೇಡ್ಕರ್‌ ಯುವಸೇನೆ ವತಿಯಿಂದ ಅಜ್ಜರಕಾಡಿನ ಸೈನಿಕರ ಹುತಾತ್ಮ ಸ್ಮಾರಕದ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ದಲಿತ ಮುಖಂಡ ಜಯನ್‌ ಮಲ್ಪೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಬುದ್ಧಿವಂತರ ಜಿಲ್ಲೆಯೆಂದು ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದೆ. ಒಂದೇ ತಿಂಗಳಲ್ಲಿ ಮೂರು ದಲಿತ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆದಿದೆ. ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ದಲಿತರಿಗೆ ರಕ್ಷಣೆ ಹಾಗೂ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಆಗದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಆಗ್ರಹಿಸಿದರು.
ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ
ಸಂತ್ರಸ್ತೆ ವಿದ್ಯಾರ್ಥಿನಿಗೆ ಅಮಲು ಪದಾರ್ಥ ನೀಡಿದ್ದರೂ ಸಹ ಪೊಲೀಸ್‌
ವರಿಷ್ಠಾಧಿಕಾರಿ, ಸಂತ್ರಸ್ತೆಯಿಂದ ಅಮಲು ಪದಾರ್ಥ ಸೇವಿಸಿಲ್ಲ ಎಂದು
ಬರೆಸಿಕೊಂಡಿದ್ದಾರೆ. ಇದು ತನಿಖೆಯ ದಿಕ್ಕು ತಪ್ಪಿಸಿ, ಆರೋಪಿಗಳನ್ನು ರಕ್ಷಣೆ ಮಾಡಲು
ಮಾಡಿದ ಷಡ್ಯಂತ್ರವಾಗಿದೆ. ಹಾಗಾಗಿ ದಕ್ಷಿಣ ಕನ್ನಡ ಎಸ್ಪಿ ವಿರುದ್ಧ ಕೂಡಲೇ ದಲಿತ
ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್‌ ಯುವಸೇನೆಯ ಅಧ್ಯಕ್ಷ ಹರೀಶ್‌ ಸಾಲ್ಯಾನ್‌, ದಲಿತ ಮುಖಂಡರಾದ ಸುಂದರ ಕಪ್ಪೆಟ್ಟು, ಸತೀಶ್‌ ಕಪ್ಪೆಟ್ಟು, ಸಂತೋಷ್‌ ಕಪ್ಪೆಟ್ಟು, ಗುಣವಂತ, ವಾಸು ನೇಜಾರ್‌, ಸುಕೇಶ್‌ ಪೂತ್ತೂರು, ಅಶೋಕ್‌ ಪೂತ್ತೂರು, ಅನಿಲ್‌ ಅಂಬಲಪಾಡಿ, ದಿನೇಶ್‌
ಮೂಡುಬೆಟ್ಟು, ಪ್ರಕಾಶ್‌ ಬ್ರಹ್ಮಾವರ, ಗಣೇಶ್‌ ನೇರ್ಗಿ, ನಾಗೇಶ್‌ ಉದ್ಯಾವರ
ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.