ಉಡುಪಿ, ಜುಲೈ 10: ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪದವಿ ತರಗತಿಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಕಡ್ಡಾಯಗೊಳಿಸುವಂತೆ ಉಡುಪಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಈ ಕುರಿತು ವಿಶ್ವ ವಿದ್ಯಾನಿಲಯ ಹಾಗೂ ರಾಜ್ಯ ಸರಕಾರದ ಗಮನಕ್ಕೆ ತರಲು ತೀರ್ಮಾನಿಸಲಾಯಿತು. ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪಿಯ ಪದವಿ ತರಗತಿಗಳಲ್ಲಿ ಪ್ರಸಕ್ತ ಇಂಗ್ಲೀಷ್ ಭಾಷೆ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದ್ದು, ಇತರೆ ಭಾಷೆ ಅಧ್ಯಯನ ಎರಡನೇ ಐಚ್ಛಿಕವಾಗಿದೆ. ರಾಜ್ಯದ ಹಲವು ವಿವಿಗಳಲ್ಲಿ ಮೊದಲ ಭಾಷೆಯಾಗಿ ಕನ್ನಡ ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿವಿಯಲ್ಲೂ ಇದೇ ರೀತಿ ಅನುಷ್ಠಾನ ಗೊಳಿಸುವಂತೆ ಸಭೆ ತೀರ್ಮಾನಿಸಿತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿದೆಡೆ ಅಳವಡಿಸಲಾಗಿರುವ ಮಾರ್ಗ ಸೂಚಿ ಫಲಕಗಳಲ್ಲಿ ಕನ್ನಡ ಅಕ್ಷರಗಳನ್ನು ತಪ್ಪು ತಪ್ಪಾಗಿ ಮುದ್ರಿಸಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲು ಸಭೆ ತೀರ್ಮಾನಿಸಿತು. ಅಂಗಡಿ, ವಾಣಿಜ್ಯ ಮಳಿಗೆ, ಉದ್ಯಮ ಸಂಸ್ಥೆಗಳ ನಾಮ ಫಲಕಗಳಲ್ಲಿ ಕನ್ನಡವನ್ನು ಮೊದಲನೇ ಸಾಲಿನಲ್ಲೇ ಕಡ್ಡಾಯವಾಗಿ ಹೆಸರು ನಮೂದಿಸಬೇಕು. ಇದನ್ನು ಉಲ್ಲಂಘಿಸಿದವರ ಲೈಸೆನ್ಸ್ನ್ನು ಅಮಾನತು ಗೊಳಿಸಲು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಕೆಲವು ಸಿಬಿಎಸ್ಇ ಶಾಲೆಗಳು ಗ್ರಾಮಾಂತರ ಮೀಸಲಾತಿ ಅಡಿ ಮೀಸಲಾತಿ ಪಡೆಯುವುದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿ ಈ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ತಂದು ಗ್ರಾಮೀಣ ಪ್ರದೇಶಗಳಲ್ಲಿರುವ ಕನ್ನಡ ಬೋಧಿಸುವ ಶಾಲೆಗಳಿಗೆ ಮಾತ್ರ ಈ ಸೌಲಭ್ಯ ನೀಡುವಂತೆ ಕೋರಲು ತೀರ್ಮಾನಿಸಲಾಯಿತು.
ಗ್ರಾಮೀಣ ಬ್ಯಾಂಕ್ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವ ನಿರ್ಧಾರ ಹಾಗೂ ಸುಪ್ರೀಂ ಕೋರ್ಟ್ ತೀರ್ಪನ್ನು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪ್ರಕಟಿಸುವ ನಿರ್ಧಾರಗಳನ್ನು ಸಭೆಯಲ್ಲಿ ಸ್ವಾಗತಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.