ಉಡುಪಿ, ಜುಲೈ 9: ಇತ್ತೀಚೆಗೆ ಜಿಲ್ಲೆಯಲ್ಲಿ ಕಲುಷಿತ ಐಸ್‍ಕ್ಯಾಂಡಿ ಸೇವಿಸಿ ಮಕ್ಕಳು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿದಂತೆ ಸಂಬಂದಪಟ್ಟವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲಾ ಮಟ್ಟದ ಆಹಾರ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕಲುಷಿತ ನೀರಿನಿಂದ ತಯಾರಿಸಿದ ಐಸ್‍ಕ್ಯಾಂಡಿ ಸೇವಿಸಿ ಸುಮಾರು 78 ಮಕ್ಕಳು ಅಸ್ವಸ್ಥಗೊಂಡಿದ್ದು, ಈ ಕುರಿತಂತೆ ಐಸ್‍ಕ್ಯಾಂಡಿ ತಯಾರಿಕರ ವಿರುದ್ದ ಇದುವರೆಗೆ ಸೂಕ್ತ ಕ್ರಮ ಕೈಗೊಳ್ಳದ ಕುರಿತು ತಮ್ಮ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಈ ಕುರಿತಂತೆ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಿ, ಇದು ಕಲುಷಿತ ಆಹಾರ ಉತ್ಪನ್ನ ತಯಾರಿಕರಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ತಯಾರಿಕಾ ಘಟಕಗಳಿಗೆ ಸುರಕ್ಷತಾ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ, ಅಲ್ಲಿನ ಶುಚಿತ್ವ ಸೇರಿದಂತೆ, ಆಹಾರ ತಯಾರಿಕೆಗೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು, ಈ ಕುರಿತು ಪ್ರತಿ ತಿಂಗಳು ವೇಳಾಪಟ್ಟಿ ಸಿದ್ದಪಡಿಸಿಕೊಂಡು ಕಾರ್ಯ ನಿರ್ವಹಿಸಿ ಎಂದ ಹೆಪ್ಸಿಬಾ ರಾಣಿ, ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ಬೀಚ್ ಪ್ರದೇಶದಲ್ಲಿನ ಗೂಡಂಗಡಿಗಳಲ್ಲಿ ತಯಾರಿಸುವ ಆಹಾರದ ಗುಣಮಟ್ಟ ಪರಿಶೀಲಿಸಿ ಮತ್ತು ಅಲ್ಲಿ ಐಸ್ ಕ್ರೀಂ ಮತ್ತು ಇತರೆ ಆಹಾರ ಸ್ವೀಕರಿಸಲು ಪ್ಲಾಸ್ಟಿಕ್ ಚಮಚ ಮತ್ತು ಇತರೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತಿರುವ ಕುರಿತಂತೆ ದೂರುಗಳಿದ್ದು, ಸಂಬಂದಪಟ್ಟ ನಗರಸಭೆ ಮತ್ತು ಪುರಸಭೆಯ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.
ಜಿಲ್ಲೆಯ ಮೀನುಗಳಲ್ಲಿ ಫಾರ್ಮಾಲಿನ್ ಸಿಂಪಡಣೆ ಕುರಿತಂತೆ ಪರಿಶೀಲಿಸಲಾಗಿ ನೆಗೆಟೀವ್ ವರದಿ ಬಂದಿದೆ, 68 ಮೀನು ಸಾಗಾಟ ವಾಹನಗಳಿಗೆ ಆಹಾರ ಸುರಕ್ಷತಾ ಪರವಾನಗಿ ನೀಡಲಾಗಿದೆ, ಜಿಲ್ಲೆಯಲ್ಲಿ 15 ಕುಡಿಯುವ ನೀರು ಘಟಕಗಳಿದ್ದು, ಯಾವುದೇ ಅನಧಿಕೃತ ಘಟಕಗಳು ಇಲ್ಲ ಎಂದು ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ವಾಸುದೇವ್ ಮಾಹಿತಿ ನೀಡಿದರು.
ಸಭೆಯಲ್ಲಿ ಎಎಸ್ಪಿ ಕುಮಾರಚಂದ್ರ, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಜಿ.ರಾಮ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.