ಮಂಗಳೂರಲ್ಲಿ ಮತ್ತೊಮ್ಮೆ ಗುಂಡಿನ ಸದ್ದು; ರೌಡಿಶೀಟರ್ ಮೇಲೆ‌ ಪೊಲೀಸರಿಂದ ದಾಳಿ

ಮಂಗಳೂರು: ಮಂಗಳೂರಿನಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿ ಬಂದಿದೆ. ರೌಡಿ ಶೀಟರ್ ಭವಿತ್ ರಾಜ್ ಎಂಬಾತನನ್ನು ಗುರುವಾರ ಬಂಧಿಸಲು ಯತ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆತನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಭಾನುವಾರ ಪಂಪುವೆಲ್ ನಲ್ಲಿ ಗೂಡ್ಸ್ ಟೆಂಪೋ ಚಾಲಕನ ಮೇಲೆ ಹಲ್ಲೆ ಪ್ರಕರಣದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಭವಿತ್ ರಾಜ್ ಭಾಗಿಯಾಗಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ ಆತನನ್ನು ಬಂಧಿಸಲು ಅಡ್ಯಾರ್ ಗೆ ಹೋಗಿದ್ದ ಕಂಕನಾಡಿ ಪೊಲೀಸರು ತೆರಳಿದ್ದು, ಆಗ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ.


ಸದ್ಯ ಆರೋಪಿ ಭವಿತ್ ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ವಿರುದ್ಧ ಈಗಾಗಲೇ ಎಂಟು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗು ಡಿಸಿಪಿ ಹನುಮಂತ ರಾಯ, ಲಕ್ಷ್ಮಿ ಗಣೇಶ್ ಭೇಟಿ ನೀಡಿದ್ದಾರೆ.