ಉಡುಪಿ: ವಿಶ್ವ ಶಾಂತಿಗೆ ಕೃಷ್ಣನ ಸಂದೇಶ ಅತೀ ಅಗತ್ಯ. ಇಂದು ವಿವಿಧ ದೇಶಗಳಲ್ಲಿ ಯುದ್ಧ, ಸಂಘರ್ಷ, ಹಾನಿ, ಪ್ರಾಕೃತಿಕ ವಿಕೋಪ ನಡೆಯುತ್ತಿದೆ. ಇದೆಲ್ಲವನ್ನು ನಿಲ್ಲಿಸಬೇಕಾದರೆ ಕೃಷ್ಣನ ಸಂದೇಶವನ್ನು ಜಗತ್ತಿನಾದ್ಯಂತ ವಿಸ್ತರಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಉಡುಪಿ ಪುತ್ತಿಗೆ ಮಠದಲ್ಲಿ ಇಂದು ಪುತ್ತಿಗೆ ಪರ್ಯಾಯದ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಕೃಷ್ಣನ ಭಗವದ್ಗೀತೆಯಲ್ಲಿ ಅನೇಕ ವಿಚಾರಗಳಿವೆ. ಇದು ವಿಶ್ವಕ್ಕೆ ಮ್ಯಾನೇಜ್ ಮೆಂಟ್ ಕೋರ್ಸ್ ಆಗಬೇಕು. ಸಣ್ಣ ಸಣ್ಣ ವಿಚಾರಗಳಿಗೆ ಘರ್ಷಣೆ, ಗಲಾಟೆ ಮಾಡಿಕೊಳ್ಳದೆ, ವಿಶ್ವದೃಷ್ಟಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕೃಷ್ಣನ ಸಂದೇಶವನ್ನು ವಿಶ್ವಕ್ಕೆ ಕೊಂಡೊಯ್ಯುವ ಪರ್ಯಾಯ ಇದಾಗಿದೆ. ಈ ನಿಟ್ಟಿನಲ್ಲಿ ಪುತ್ತಿಗೆ ಪರ್ಯಾಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಶಾಸಕರಾದ ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್, ಸೂರ್ಯನಾರಾಯಣ ಉಪಾಧ್ಯಾಯ, ರಂಜನ್ ಕಲ್ಕೂರ, ಹೆರಂಜೆ ಕೃಷ್ಣ ಭಟ್, ನಾಗೇಶ್ ಹೆಗ್ಡೆ, ಬೆಳಪು ದೇವಿಪ್ರಸಾದ್ ಶೆಟ್ಟಿ, ಲಕ್ಷ್ಮೀನಾರಾಯಣ ಅಸ್ರಣ್ಣ ಮೊದಲಾದವರು ಉಪಸ್ಥಿತರಿದ್ದರು.