ಬೆಂಗಳೂರು: ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣದಲ್ಲಿ ಪಕ್ಷದ ಯಾರೂ ಕೂಡಾ ಚೈತ್ರಾ ಬೆಂಬಲಕ್ಕೆ ನಿಂತಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ನಾವು ಯಾರೂ ಕೂಡಾ ವರನ್ನು ರಕ್ಷಿಸುತ್ತಿಲ್ಲ ಅಥವಾ ಯಾರಿಗೂ ಶಿಫಾರಸು ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮಲ್ಲಿ ಯಾರಿಗೂ ಚೈತ್ರಾ ಜೊತೆ ವೈಯಕ್ತಿಕ ಅಥವಾ ನೇರವಾದ ಯಾವುದೇ ಸಂಬಂಧ ಇಲ್ಲ, ಈ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ. ಕಾನೂನಿನ ಪ್ರಕಾರ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆಕೆ ತಪ್ಪು ಮಾಡಿದ್ದಲ್ಲಿ ಶಿಕ್ಷೆ ಆಗಲಿ ಆದರೆ ಆಕೆ ತಪ್ಪು ಮಾಡಿಲ್ಲ ಎಂದಾದಲ್ಲಿ ಸುಮ್ಮನೆ ತೊಂದರೆ ಕೊಡುವುದು ಬೇಡ. ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆಯಲಿ ಎಂದು ಅವರು ಹೇಳಿದ್ದಾರೆ.
ರಾಜಕೀಯದಲ್ಲಿ ಪಕ್ಷದ ವರಿಷ್ಠರಿಗೆ ಮಾತ್ರ ಟಿಕೆಟ್ ಹಂಚಿಕೆ ಮಾಡುವ ಅಧಿಕಾರವಿರುತ್ತದೆ. ಅದನ್ನು ಹೊರತು ಪಡಿಸಿ ಯಾರಿಗೂ ಟಿಕೆಟ್ ನೀಡುವ ಅಧಿಕಾರ ಇಲ್ಲ. ಯರದೇ ಹೆಸರು ಬಳಸಿ ಅಥವಾ ತನ್ನ ಹೆಸರು ಬಳಸಿ ಮೋಸ ಮಾಡಿದ್ದಲ್ಲಿ ಅದರ ಬಗ್ಗೆಯೂ ತನಿಖೆ ನಡೆಯಲಿ ಎಂದು ಅವರು ತಿಳಿಸಿದ್ದಾರೆ.