ವಿಚಾರಣೆಗೆ ಸಹಕರಿಸದ ಚೈತ್ರಾಳಿಂದ ಹೈಡ್ರಾಮ: ಹೈರಾಣಾದ ಸಿಸಿಬಿ ಪೊಲೀಸರು

ಬೆಂಗಳೂರು: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿಗೆ 5 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಸಿಸಿಬಿ ಪೊಲೀಸರ​ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ವಿಷಯ ವರದಿಯಾಗಿದೆ.

ವಿಚಾರಣೆ ವೇಳೆ ಹೈಡ್ರಾಮಾ ಮಾಡುತ್ತಿರುವ ಚೈತ್ರಾ ನಾನೇನು ಮಾಡಿಲ್ಲ, ಎಲ್ಲವೂ ಸ್ವಾಮೀಜಿಗೆ ಗೊತ್ತು ಎಂದು ಮಾತ್ರ ಹೇಳುತ್ತಿದ್ದಾಳೆ. ಅಲ್ಲದೆ ಪ್ರತಿಯೊಂದಕ್ಕೂ ಅಳುವುದು ಮತ್ತು ಕೂಗಾಡುತ್ತಿದ್ದಾಳೆ. ಹಾಗಾಗಿ ಇದುವರೆಗೂ ಒಂದು ಪುಟ ಹೇಳಿಕೆಯನ್ನೂ ದಾಖಲು ಮಾಡಲು ಸಾಧ್ಯವಾಗಿಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಇಂದು ಬೆಳಗ್ಗೆ ವಿಚಾರಣೆ ವೇಳೆ ಚೈತ್ರಾ ಮೂರ್ಛೆ ತಪ್ಪಿ ಕೆಳಗೆ ಬಿದಿದ್ದು ಆಕೆಯನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ತನ್ನ ದುಪಟ್ಟವಾನು ತಾನೇ ಕುತ್ತಿಗೆಗೆ​ ಸುತ್ತಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಮೂರ್ಛೆ ಹೋಗಿದ್ದಾಳೆ ಎನ್ನಲಾಗಿದೆ. ಚೈತ್ರಾಗೆ ಮೂರ್ಛೆ ರೋಗ ಇರುವ ಬಗ್ಗೆ ಆಕೆಯ ಪರಿವಾರದವರು ತಿಳಿಸಿದ್ದಾರೆ. ಹಿಂದೆಯೂ ಕೆಲವು ಬಾರಿ ಚೈತ್ರಾಗೆ ಈ ರೋಗ​ ಕಾಣಿಸಿಕೊಂಡಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಆದರೆ, ಚೈತ್ರಾ ಈಗ ಔಷಧ ತೆಗೆದುಕೊಳ್ಳದಿರುವುದರಿಂದ ಇದರಿಂದ ಮೂರ್ಛೆ ಹೋಗಿರಬಹುದೆಂದು ಹೇಳಲಾಗಿದೆ. ಚೈತ್ರಾ ಮನೆಯವರನ್ನು ಸಂಪರ್ಕಿಸಿರುವ ಸಿಸಿಬಿ ಈ ಮಾಹಿತಿ ಪಡೆದುಕೊಂಡಿದೆ ಎನ್ನಲಾಗಿದೆ.