ಬಹರೈನ್ ಕನ್ನಡ ಭವನ ನಿರ್ಮಾಣ ಕಾರ್ಯ‌ ವರ್ಷಾಂತ್ಯದೊಳಗೆ ಪೂರ್ಣ: ಪ್ರದೀಪ್ ಶೆಟ್ಟಿ

ಉಡುಪಿ: ಬಹರೈನ್‌ನಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಭವನ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಕರ್ನಾಟಕ ಸರ್ಕಾರದ ಅನುದಾನದಿಂದ ವಿದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ಕನ್ನಡ ಭವನ ಇದಾಗಿದೆ ಎಂದು ಬಹರೈನ್‌ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್‌ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ‌ ತಿಳಿಸಿದರು.
ಕಳೆದ ನವೆಂಬರ್‌ ತಿಂಗಳಿನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು  ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ್ದರು. ಸದ್ಯ ಭವನದ ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದೆ. ೨೦೦೮––೦೯ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಬಹರೈನ್‌ಗೆ ಆಗಮಿಸಿದ ವೇಳೆ ಕರ್ನಾಟಕ ಸರ್ಕಾರದಿಂದ ೧ ಕೋಟಿ ಅನುದಾನ ಬಿಡುಗಡೆಗೊಳಿಸಿ ಸಹಕಾರ ನೀಡಿದ್ದರು ಎಂದರು.
ನೂತನ ಕನ್ನಡ ಕೇವಲ ಬಹರೈನ್‌ ಕನ್ನಡಿಗರಷ್ಟೇ ಅಲ್ಲದೆ ಕೊಲ್ಲಿ ರಾಷ್ಟ್ರದಲ್ಲಿರುವ ಕನ್ನಡಿಗರಿಗೂ ಕಲೆ ಮತ್ತು ಸಂಸ್ಕೃತಿಕ ಕೇಂದ್ರವಾಗಲಿದೆ. ‘ಸಂಘ ಜೀವನ-ಸುಖ ಜೀವನ’ ಎಂಬ ಧ್ಯೇಯ ಮಂತ್ರದೊಂದಿಗೆ ಆರಂಭಗೊಂಡ ಬಹರೈನ್‌ ಕನ್ನಡ ಸಂಘವು ಕರ್ನಾಟಕದಿಂದ ಬಹರೈನ್‌ಗೆ ಬಂದು ನೆಲೆಸಿದ ಸಮಸ್ತ ಕನ್ನಡಿಗರ ಇನ್ನೊಂದು ಮನೆಯೇ ಆಗಿದೆ ಎಂದರು.
ಸಂಘದಲ್ಲಿ ಹೆಚ್ಚುತ್ತಿರುವ ಕನ್ನಡಿಗರ ಸಂಖ್ಯೆ, ಸದಸ್ಯರಿಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳು ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರೆಲ್ಲರೂ ಒಟ್ಟಾಗಿ ತೆಗೆದುಕೊಂಡ ನಿರ್ಧಾರವೇ ಬಹರೈನ್‌ ಕನ್ನಡಿಗರ ಕನಸಿನ ಸೌಧ ಕನ್ನಡ ಭವನದ ನಿರ್ಮಾಣ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಡಿ. ರಮೇಶ್‌, ಕಟ್ಟಡ ಸಮಿತಿಯ ಸಂಚಾಲಕ ಆಸ್ಟೀನ್‌ ಸಂತೋಷ್‌, ಕಟ್ಟಡ ನಿಧಿ ಸಂಗ್ರಹ ಸಮಿತಿ ಸುಧಾಕರ್‌ ಶೆಟ್ಟಿ ಇದ್ದರು.