ಮುಂಬೈ : ಜಾಗತಿಕ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಯ ಮಧ್ಯೆ ದೇಶೀಯ ಸ್ಥೂಲ ಆರ್ಥಿಕ ದತ್ತಾಂಶಗಳು ಸಕಾರಾತ್ಮಕವಾಗಿರುವ ಹಿನ್ನೆಲೆಯಲ್ಲಿ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಸತತ ಎರಡನೇ ಅವಧಿಗೆ ಏರಿಕೆ ಕಂಡವು.
ಸೋಮವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯಲ್ಲಿ ಕೊನೆಗೊಂಡಿವೆ.
ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 240.98 ಪಾಯಿಂಟ್ ಅಥವಾ ಶೇಕಡಾ 0.37 ರಷ್ಟು ಏರಿಕೆ ಕಂಡು 65,628.14ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 296.75 ಪಾಯಿಂಟ್ ಅಥವಾ ಶೇಕಡಾ 0.45 ರಷ್ಟು ಏರಿಕೆ ಕಂಡು 65,683.91 ಕ್ಕೆ ತಲುಪಿತ್ತು. ನಿಫ್ಟಿ 93.50 ಪಾಯಿಂಟ್ ಅಥವಾ ಶೇಕಡಾ 0.48 ರಷ್ಟು ಏರಿಕೆ ಕಂಡು 19,528.80 ರಲ್ಲಿ ಕೊನೆಯಾಯಿತು.ಹೊಸ ವಿದೇಶಿ ನಿಧಿಯ ಒಳಹರಿವು ಮತ್ತು ಐಟಿ ಮತ್ತು ಸರಕು ಷೇರುಗಳಲ್ಲಿನ ತೀವ್ರ ಖರೀದಿ ಕೂಡ ಸಕಾರಾತ್ಮಕ ಭಾವನೆ ಹೆಚ್ಚಿಸಿದೆ ಎಂದು ಟ್ರೇಡರ್ಸ್ ತಿಳಿಸಿದ್ದಾರೆ.
ಮಿಡ್ ಮತ್ತು ಸ್ಮಾಲ್ ಕ್ಯಾಪ್ ಗಳು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದವು. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕವು ವಹಿವಾಟಿನಲ್ಲಿ 31,783.29 ರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ಇದು ಶೇಕಡಾ 0.96 ರಷ್ಟು ಏರಿಕೆಯಾಗಿ 31,736.06 ಕ್ಕೆ ಕೊನೆಗೊಂಡಿತು. ಬಿಎಸ್ಇ ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇಕಡಾ 0.84 ರಷ್ಟು ಏರಿಕೆ ಕಂಡು 37,734.14 ಕ್ಕೆ ತಲುಪಿದೆ. ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್ ಲಾಭದಲ್ಲಿ ಕೊನೆಗೊಂಡವು.
ಆರಂಭಿಕ ವಹಿವಾಟಿನಲ್ಲಿ ಯುರೋಪಿಯನ್ ಮಾರುಕಟ್ಟೆಗಳು ಸಕಾರಾತ್ಮಕವಾಗಿ ವಹಿವಾಟು ನಡೆಸುತ್ತಿದ್ದವು. ಯುಎಸ್ ಮಾರುಕಟ್ಟೆಗಳು ಶುಕ್ರವಾರ ಹೆಚ್ಚಾಗಿ ಸಕಾರಾತ್ಮಕವಾಗಿಯೇ ಕೊನೆಗೊಂಡಿದ್ದವು. ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.09 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 88.64 ಡಾಲರ್ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶುಕ್ರವಾರ 487.94 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ – ಅಂಶಗಳು ತಿಳಿಸಿವೆ.ಸೆನ್ಸೆಕ್ಸ್ ವಿಚಾರದಲ್ಲಿ ನೋಡುವುದಾದರೆ ವಿಪ್ರೋ ಶೇಕಡಾ 4.34 ರಷ್ಟು ಏರಿಕೆ ಕಂಡರೆ, ಎಚ್ಸಿಎಲ್ ಟೆಕ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಎನ್ಟಿಪಿಸಿ, ಇನ್ಫೋಸಿಸ್, ಪವರ್ ಗ್ರಿಡ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಏರಿಕೆಯಾದವು. ಮಹೀಂದ್ರಾ & ಮಹೀಂದ್ರಾ, ಐಟಿಸಿ, ಆಕ್ಸಿಸ್ ಬ್ಯಾಂಕ್, ನೆಸ್ಲೆ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ನಷ್ಟ ಅನುಭವಿಸಿದವು.