ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ. 12.5% ಡಿವಿಡೆಂಡ್ ಘೋಷಣೆ

ಬೈಂದೂರು: ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ವಿಜಯಶಾಸ್ತ್ರೀ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಘವು ದಿನೇ ದಿನೇ ಪ್ರಗತಿ ಪಥದತ್ತ ಮುನ್ನೆಡೆಯುತ್ತಿದೆ. ಸದಸ್ಯರಿಗೆ ಸಾಲ ನೀಡುವಿಕೆಯಲ್ಲಿ ಹೆಚ್ಚಳ, ಠೇವಣಾತಿಯಲ್ಲಿ ಹೆಚ್ಚಳ ಸಾಧಿಸಿದ್ದು ರೈತರಿಗೆ ಬೇಕಾದ ಅನುಕೂಲತೆಗಳನ್ನು ಸಂಘವು ಒದಗಿಸಿಕೊಡುತ್ತಿದೆ. ರೈತರಿಗೆ ಬೇಕಾದ ರಸಗೊಬ್ಬರ ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಸದಸ್ಯರಿಂದ ಜನೌಷಧಿ ಕೇಂದ್ರ, ಪೆಟ್ರೋಲ್ ಬಂಕ್, ಸೂಪರ್ ಮಾರ್ಕೆಟ್ ಆರಂಭಿಸುವ ಬಗ್ಗೆ ಸಲಹೆ ಬಂದಿದ್ದು ಎಲ್ಲ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಸಂಘವು ನಷ್ಟ ಮಾಡಿಕೊಳ್ಳದೆ ಸರಕಾರದ ಸಹಕಾರದೊಂದಿಗೆ ಬೇಡಿಕೆ ಈಡೇರಿಸುತ್ತಿದೆ. ಈಗಾಗಲೇ ಸುಸಜ್ಜಿತ ಕಟ್ಟಡ ಹೊಂದಿರುವ ಸಂಘದ ಸಾಲ ವಸೂಲಾತಿ ಪ್ರಮಾಣ 97% ಇದೆ. ಇದನ್ನು 100% ಮಾಡುವಲ್ಲಿ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಸದಸ್ಯರು ಸಹಕರಿಸಬೇಕು. ಈ ಬಾರಿ ಸಂಘವು 94 ಲಕ್ಷ ಲಾಭ ಗಳಿಸಿದ್ದು ಸದಸ್ಯರಿಗೆ 12.5 ಶೇ ಡಿವಿಡೆಂಟ್ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗುರುತಿಸಿ ಅಭಿನಂದಿಸಲಾಯಿತು. ಸಂಘದ ವ್ಯಾಪ್ತಿಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ಅಭಿಮನ್ಯು ಉದಯನಗರ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಅಕ್ಷಯ ಮದೂರು ಇವರನ್ನು ಸನ್ಮಾನಿಸಲಾಯಿತು.

ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಾಗ ಉಚಿತವಾಗಿ ಚಿಕಿತ್ಸೆ ನೀಡಿದ ವರ್ಗೀಸ್ ಎಸ್ ಮತ್ತು ಗಣೇಶ ಇವರನ್ನು ಸನ್ಮಾನಿಸಲಾಯಿತು.

ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ, ನಿರ್ದೇಶಕ ನಿಶಾದ್, ಚಂದ್ರಶೇಖರ, ರಾಘವೇಂದ್ರ ಡಿ, ಶ್ರೀಮತಿ ಸಿ.ಕೆ ವಿಜಿ, ಶ್ರೀಮತಿ ಸುಶೀಲ, ಸುವರ್ಣ ಕುಮಾರ್, ಬೆನ್ನಿ, ಜಯಂತ, ಬಸವ ನಾಯ್ಕ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕೊಲ್ಲೂರು ಶಾಖಾ ವ್ಯವಸ್ಥಾಪಕ ಗಂಗಾಧರ್ ಭಟ್ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿ ಸ್ವಾಗತಿಸಿದರು. ಮಂಜುನಾಥ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ಪ್ರವೀಣ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಉಪಾಧ್ಯಕ್ಷ ನಕ್ಷತ್ರ ಭೋವಿ ವಂದಿಸಿದರು.