ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಚುನಾವಣೆ ಪೂರ್ವ ತಯಾರಿ ಕುರಿತು ಕಾರ್ಯಾಗಾರ

ಉಡುಪಿ: ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಸಹಕಾರ ಸಂಘಗಳ ಕಾರ್ಯನಿರ್ವಾಹಕರಿಗೆ ಚುನಾವಣೆ ಪೂರ್ವ ತಯಾರಿ ಕುರಿತು ತರಬೇತಿ ಕಾರ್ಯಾಗಾರ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಬುಧವಾರದಂದು ನೆರವೇರಿತು.

ಸಹಕಾರ ಸಂಘಗಳ ಜಿಲ್ಲಾ ಪ್ರಭಾರ ಉಪನಿಬಂಧಕ ರಮೇಶ್ ಎಚ್.ಎನ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಯೂನಿಯನ್ ಮೂಲಕ ವರ್ಷಕ್ಕೆ ಸುಮಾರು 14 ರಷ್ಟು ತರಬೇತಿ ನೀಡಲಾಗುತ್ತದೆ. ಇದಕ್ಕೆ ಬೇಕಿರುವ ಎಲ್ಲ ರೀತಿಯ ಬೆಂಬಲವನ್ನು ಒದಗಿಸಲಾಗುತ್ತಿದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು. ತರಬೇತಿ ಶಿಬಿರಗಳ ಮಾಹಿತಿ ಪಡೆದು ಅದನ್ನು ಅನುಷ್ಠಾನಗೊಳಿಸುವ ಕೆಲಸವಾಗಬೇಕು ಎಂದರು.

ಅತಿಥಿ ಉಪನ್ಯಾಸಕ ಸಹಕಾರ ಸಂಘಗಳ ಉಪನಿಭಂದಕ ರೋಹಿತ್ ಹಾಗೂ ಸಹಕಾರ ಸಂಘಗಳ ದಾಖಲೆ ಪತ್ರ ನಿರ್ವಹಣೆ ಹಾಗೂ ವಕೀಲ ನಾಗರಾಜ್ ಸಹಕಾರ ಸಂಘಗಳ ಚುನಾವಣೆ, ಅದರ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡಿದರು.

ಆಡಳಿತ ಮಂಡಳಿ ಸದಸ್ಯರಾದ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಕಟಪಾಡಿ ಶಂಕರ ಪೂಜಾರಿ, ಕೆ.ಕೊರಗ ಪೂಜಾರಿ, ಅನಿಲ್ ಎಸ್.ಪೂಜಾರಿ, ಹರೀಶ್ ಶೆಟ್ಟಿ, ಹರೀಶ್ ಕಿಣಿ, ಕೆ.ಸುರೇಶ್ ರಾವ್, ಎಚ್.ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.