ಆ. 27 ರಂದು 227ನೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಆಚರಣೆ

ಉಡುಪಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ {ರಿ} ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ 227ನೇ ರಾಯಣ್ಣ ಉತ್ಸವವನ್ನು ಉಡುಪಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು. ಆ. 27 ಭಾನುವಾರ ಬೆಳಿಗ್ಗೆ 9.30 ರಿಂದ ಬನ್ನಂಜೆಯ ಶ್ರೀ ನಾರಾಯಣ ಗುರು ಅಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದ.ಕ ಜಿಲ್ಲೆ ಇದರ ಅಧ್ಯಕ್ಷ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಬೈಲಹೊಂಗಲದ ದುರ್ಗಾದೇವಿ ದೇವಸ್ಥಾನದ ಧರ್ಮದರ್ಶಿ ಶ್ರೀ ಮಹಾಂತಯ್ಯ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಸಮಾರಂಭವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟನೆ ಮಾಡಲಿರುವರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ, ಕರ್ನಾಟಕ ಸರಕಾರದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಲಿದ್ದಾರೆ ಎಂದರು.

ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್, ರಾಯಣ್ಣ ಪುರಸ್ಕಾರ ಪ್ರದಾನ ಮಾಡಲಿರುವವರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದ.ಕ ಜಿಲ್ಲೆಯ ಅಧ್ಯಕ್ಷ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ವಹಿಸಿಕೊಳ್ಳಲಿದ್ದಾರೆ.

ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತ್ರಿಷಿಕಾ ಹಿಂದುಳಿದ ಮಹಿಳಾ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷೆ ಭಾಗ್ಯಶ್ರೀ ಬಾಬಣ್ಣ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಗೌರವಾಧ್ಯಕ್ಷ ಜನಾರ್ದನ್ ಕೊಡವೂರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಬಾಗಲಕೋಟೆಯ ಅಧ್ಯಕ್ಷ ಬರಮು ಪೂಜಾರಿ, ಉಡುಪಿ ಜಿಲ್ಲಾ ಶ್ರೀರಾಮ ಸೇನೆ ಅಧ್ಯಕ್ಷ ಜಯ ರಾಮ ಅಂಬೆಕಲ್ಲು, ಉಡುಪಿಯ ಕನಕದಾಸ ಸಮಾಜ ಸೇವಾ ಸಂಘ ಅಧ್ಯಕ್ಷ ಹನುಮಂತ ಜಿ. ಡೊಳ್ಳಿನ, ಕರ್ನಾಟಕ ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ಹನುಮಂತ ಜಿ. ಗೋಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದ.ಕ ಜಿಲ್ಲೆ ಕಾರ್ಯಾಧ್ಯಕ್ಷ ಮಂಜುನಾಥ ಆರ್ ನೋಟಗಾರ್, ಪರ್ಕಳದ ಸುಮಂಗಲ ಸ್ಟೋರ್ ಮಾಲಕ ಪ್ರಕಾಶ್ ಶೆಣೈ, ನ್ಯಾಚುರಲ್ ಗ್ರಾನೈಟ್ ಮಾಲಕ ನೀಲೇಶ್ ಉಪಸ್ಥಿತರಿರುವರು.

2023ರ ರಾಯಣ್ಣ ಪುರಸ್ಕಾರವನ್ನು ಉಡುಪಿಯ ಸಮಾಜ ಸೇವಕ ಆಪತ್ಬಾಂಧವ ಈಶ್ವರ್ ಮಲ್ಪೆ ಅವರಿಗೆ ನೀಡಲಾಗುವುದು. 11.15ಕ್ಕೆ ಕುಂಭ ಮೆರವಣಿಗೆಗೆ ಚಾಲನೆಯನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ನೀಡಲಿದ್ದಾರೆ. ಕುಂಭ ಮೆರವಣಿಗೆಯು ಶ್ರೀ ನಾರಾಯಣ ಗುರು ಅಡಿಟೋರಿಯಂ ಬನ್ನಂಜೆಯಿಂದ ಆರಂಭಗೊಂಡು ರಥ ಬೀದಿಯ ಕನಕ ಗೋಪುರದವರೆಗೆ ನಡೆಯಲಿದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ರೂಬಿಕ್ಸ್ ಕ್ಯೂಬ್ ನಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಗಿನ್ನಿಸ್ ರೆಕಾರ್ಡ್ ದಾಖಲೆಯ ಪ್ರಥ್ವಿಶ್ ಕೆ.ಭಟ್ ರಚಿಸಲಿದ್ದಾರೆ ಎಂದು ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಜನಾರ್ದನ್ ಕೊಡವೂರು, ಗೌರವ ಸಲಹೆಗಾರ ಕೃಷ್ಣಶೆಟ್ಟಿ ಬೆಟ್ಟು, ಕಾರ್ಯಾಧ್ಯಕ್ಷ ಕುಮಾರ ಪ್ರಸಾದ್, ಉಪಾಧ್ಯಕ್ಷ ಲಕ್ಷ್ಮಣ್ ಕೋಲ್ಕಾರ್, ಕಾರ್ಯದರ್ಶಿ ವಿಠ್ಠಲ್ ಗೌಡರ್ ಮತ್ತು ಖಜಾಂಜಿ ಪಂಪೇಶ್ ಉಪಸ್ಥಿತರಿದ್ದರು.