ಟೊಮೆಟೊ ಮಾರಿ ಎಸ್.ಯು.ವಿ ಖರೀದಿಸಿದ ರೈತ: ಉದ್ಯೋಗಪತಿಗಳು ಮಾತ್ರವಲ್ಲ, ರೈತರಿಗೂ ಒಂದು ಕಾಲ ಬರುವುದೆಂದು ತೋರಿದ ಟೊಮೆಟೊ!!

ಚಾಮರಾಜನಗರ: ಕೃಷಿ ಜೀವನ, ರೈತರಾಗಿರುವುದೆಂದರೆ ಸದಾ ಬಡತನದಲ್ಲೇ ದಿನಗಳೆಯುವುದು ಎನ್ನುವ ಮಾತಿಗೆ ಗಗನಕ್ಕೇರಿದ ಟೊಮೆಟೊ ಬೆಲೆ ಛಾಟಿ ಬೀಸಿದೆ. ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಟೊಮೆಟೊ ಬೆಳೆದು ಮಂಡಿಗಳಲ್ಲಿ ಟೊಮೆಟೋವನ್ನು ಭಾರಿ ಬೆಲೆಗೆ ಮಾರಾಟ ಮಾಡಿ ಅನೇಕ ರೈತರು ಕೋಟ್ಯಾಧಿಪತಿಗಳಾಗಿದ್ದಾರೆ. ಇದೇ ರೀತಿಯ ಘಟನೆಯಲ್ಲಿ, ಚಾಮರಾಜನಗರದ ರೈತ ರಾಜೇಶ್ ತಾನು ಬೆಳೆದ ಟೊಮೆಟೊ ಮಾರಾಟ ಮಾಡುವ ಮೂಲಕ ಸುಮಾರು 40 ಲಕ್ಷ ರೂ. ಸಂಪಾದಿಸಿದ್ದಾರೆ. ಬೆಲೆ ಹೆಚ್ಚಾಗುವ ಮೊದಲು ಅವರು ತಮ್ಮ 12 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದರು. ಸ್ಥಳೀಯ ಪ್ರಸಾರ ವಾಹಿನಿ ಟಿವಿ9 ಕನ್ನಡದೊಂದಿಗೆ ಮಾತನಾಡಿದ ಅವರು, ಈ ಋತುವಿನಲ್ಲಿ ತಮ್ಮ ಬೆಳೆ ಮಾರಿ ದುಡಿದ ಹಣದಿಂದ ಎಸ್‌ಯುವಿ ಖರೀದಿಸಿರುವುದಾಗಿ ತಿಳಿಸಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜೇಶ್, “ನನ್ನ 12 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದೇನೆ. ನಾನು ಸುಮಾರು 800 ಚೀಲ ಟೊಮೆಟೊಗಳನ್ನು ಮಾರಾಟ ಮಾಡಿದ್ದೇನೆ ಮತ್ತು 40 ಲಕ್ಷ ಗಳಿಸಿದ್ದೇನೆ. ಇನ್ನೂ ಕೆಲವು ತಿಂಗಳುಗಳ ಕಾಲ ಟೊಮೇಟೊ ಬೆಲೆ ಇದೇ ರೀತಿ ಇದ್ದರೆ 1 ಕೋಟಿ ಲಾಭವೂ ಆಗಬಹುದು. ನಾನು ನನ್ನ ಭೂಮಿಯನ್ನು ನಂಬಿದ್ದೇನೆ ಮತ್ತು ಅದು ನಿರಾಶೆಗೊಳಿಸಲಿಲ್ಲ. ಟೊಮ್ಯಾಟೊ ಮಾರಾಟ ಮಾಡಿದ ನಂತರ ಎಸ್‌ಯುವಿ ಖರೀದಿಸಲು ಇದು ನನಗೆ ಸಹಾಯ ಮಾಡಿತು” ಎಂದಿದ್ದಾರೆ.

ಇದೀಗ ಉತ್ತಮ ಬದುಕಿಗೆ ಬೇಕಾದಷ್ಟು ಹಣವಿರುವುದರಿಂದ ಆತ ವಧುವಿನ ಹುಡುಕಾಟದಲ್ಲಿದ್ದಾರೆ. “ಕುಟುಂಬಗಳು ಸರ್ಕಾರಿ ಮತ್ತು ಕಾರ್ಪೊರೇಟ್ ಉದ್ಯೋಗದ ವರಗಳಿಗೆ ಆದ್ಯತೆ ನೀಡಿದ್ದರಿಂದ ನಾನು ಈ ಮೊದಲು ತಿರಸ್ಕರಿಸಲ್ಪಟ್ಟಿದ್ದೇನೆ. ಸರಿಯಾದ ಸಮಯ ಬಂದರೆ ರೈತರು ಉದ್ಯೋಗಿಗಿಂತಲೂ ಹೆಚ್ಚು ಹಣವನ್ನು ಗಳಿಸಬಹುದು ಎಂದು ನಾನು ಹೇಳಲು ಬಯಸುತ್ತೇನೆ. ನನ್ನ ಹೊಸ ಎಸ್.ಯು.ವಿ ಚಲಾಯಿಸುತ್ತಾ ನಾನೀಗ ವಧುವನ್ನು ಹುಡುಕಲು ಬಯಸುತ್ತೇನೆ” ಎಂದಿದ್ದಾರೆ.