ಉಡುಪಿ: ಮಂಗಳೂರಿನಿಂದ ಕಾರವಾರ ಕಡೆಗೆ ತೆರಳುತ್ತಿದ್ದ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರ್ ರಸ್ತೆಬದಿ ಮಗುಚಿ ಬಿದ್ದ ಘಟನೆ ಬುಧವಾರ ಬೆಳಗ್ಗೆ 5:45 ರ ವೇಳೆಗೆ ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಟ್ಯಾಂಕರ್ ಚಾಲಕ ಉದ್ಯಾವರದಲ್ಲಿ ಟ್ಯಾಂಕರಿಗೆ ಡಿಸೇಲ್ ತುಂಬಿಸಿಕೊಂಡು ಮುಂದೆ ಸಾಗಿದ್ದು, ಸ್ವಲ್ಪ ದೂರ ತೆರಳುವಾಗ ಪೆಟ್ರೋಲ್ ಬಂಕ್ ನಲ್ಲಿ ಸ್ವೈಪ್ ಮಾಡಿರುವ ಎಟಿಎಂ ಕಾರ್ಡ್ ಅಲ್ಲೇ ಬಿಟ್ಟಿರುವುದು ಚಾಲಕನ ನೆನಪಿಗೆ ಬಂದಿದೆ.
ಹೀಗಾಗಿ ಆತ ಬಲಾಯಿಪಾದೆಯ ಯುಟರ್ನ್ ನಲ್ಲಿ ಟ್ಯಾಂಕರನ್ನು ತಿರುಗಿಸಲು ಪ್ರಯತ್ನಿಸಿದ್ದು ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ಬದಿ ಮಗುಚಿದೆ ಎನ್ನಲಾಗಿದೆ. ಆದರೆ ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆಯಾಗಿಲ್ಲ.
ಸ್ಥಳಕ್ಕೆ ಉಡುಪಿಯ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿ ಕಟ್ಟೆಚ್ಚರ ವಹಿಸಿದ್ದಾರೆ ಟ್ಯಾಂಕರ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.