ಕಾರ್ಕಳ: ರಸಾಯನಶಾಸ್ತ್ರವು ನಿರಂತರ ಅಧ್ಯಯನ ಮತ್ತು ಅಧ್ಯಾಪನಕ್ಕೆ ಪೂರಕವಾಗಿದ್ದು, ಬೋಧನಾ ಅಭ್ಯಾಸ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ ಹೇಳಿದರು.
ಅವರು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಕಲ್ಯಾಣಪುರದ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲ ಸ್ಟ್ಯಾನಿ ಲೋಬೋ ಮಾತನಾಡಿ, ಉತ್ತಮ ಬೋಧನೆಯಲ್ಲಿ ಇಂತಹ ಕಾರ್ಯಗಾರವು ವಿಶೇಷ ಪಾತ್ರವನ್ನು ವಹಿಸುತ್ತದೆ. ವಿಷಯದ ಕುರಿತು ಆಳವಾದ ಅರಿವನ್ನು ತಿಳಿಯಲು ಇಂತಹ ಕಾರ್ಯಗಾರ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಆದರ್ಶ ಎಂ ಕೆ. ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಪಿ ವಸಂತ್ ಆಚಾರ್ ಮಾತನಾಡಿ, ವಿನೂತನ, ಪ್ರಯೋಗಾತ್ಮಕ, ನಿರಂತರ ಬೋಧನೆಯು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆಯನ್ನು ಸೃಷ್ಟಿಸುತ್ತದೆ ಎಂದರು.
ವೇದಿಕೆಯಲ್ಲಿ ಯು ಎಲ್ ಭಟ್, ಮಂಜುನಾಥ್ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಿಂದಿ ಉಪನ್ಯಾಸಕ ಸುಧಾಕರ ಐ.ಡಿ ನಿರ್ವಹಿಸಿದರು.