9 ವರ್ಷಗಳಲ್ಲಿ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ವಸೂಲಿ ಮಾಡಿದ ಬ್ಯಾಂಕ್

 

ನವದೆಹಲಿ: ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, ಕಳೆದ ಒಂಬತ್ತು ಹಣಕಾಸು ವರ್ಷಗಳಲ್ಲಿ ಒಟ್ಟು 10,16,617 ಕೋಟಿ ರೂ.ಗೂ ಹೆಚ್ಚು ಸಾಲವನ್ನು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ವಸೂಲಿ ಮಾಡಿವೆ.ಕೆಟ್ಟ ಸಾಲದ ಹೊರೆಯನ್ನು ತಗ್ಗಿಸಲು ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ.ಈ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ಆರ್‌ಬಿಐ ಮತ್ತು ಸರಕಾರ ಕೈಗೊಂಡ ಕ್ರಮಗಳಿಂದಾಗಿ ಕಳೆದ ಒಂಬತ್ತು ವರ್ಷಗಳಲ್ಲಿ 10 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಬಾಕಿ ಉಳಿದ್ದ ಸಾಲವನ್ನು ವಸೂಲಿ ಮಾಡುವಲ್ಲಿ ಬ್ಯಾಂಕ್​ಗಳು ಯಶಸ್ವಿಯಾಗಿವೆ.

ಸೆಂಟ್ರಲ್ ರೆಪೊಸಿಟರಿ ಆಫ್ ಡಾಟಾ ಆನ್ ಲಾರ್ಜ್ ಲೋನ್ಸ್ ಮಾಹಿತಿ: ಸೆಂಟ್ರಲ್ ರೆಪೊಸಿಟರಿ ಆಫ್ ಡಾಟಾ ಆನ್ ಲಾರ್ಜ್ ಲೋನ್ಸ್ (CRILC) ಪ್ರಕಾರ, 1,000 ಕೋಟಿ ರೂ.ಗಿಂತ ಹೆಚ್ಚಿನ ಸಾಲ ಹೊಂದಿರುವ ಕಂಪನಿಗಳು, ಮಾರ್ಚ್ 2023ರ ಅಂತ್ಯದ ವೇಳೆಗೆ ಅಂದ್ರೆ, ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ 1,03,975 ಕೋಟಿ ರೂ. ಸಾಲ ಬಾಕಿ ಉಳಿಸಿವೆ. ರಿಸರ್ವ್ ಬ್ಯಾಂಕ್ ಸ್ಥಾಪಿಸಿದ CRILC ಸಾಲದಾತರ ಸಾಲಗಳ ಬಗ್ಗೆ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ವಿಶ್ಲೇಷಿಸುತ್ತದೆ. ಬ್ಯಾಂಕ್‌ಗಳು ವಾರಕ್ಕೊಮ್ಮೆ ಡೇಟಾವನ್ನು ಪ್ರಕಟಿಸುತ್ತವೆ.

ಸಿಬಿಡಿಸಿಗಳಿಗೆ ಹೆಚ್ಚಿನ ಸಾಮರ್ಥ್ಯ ಇರುವುದನ್ನು ಗುರುತಿಸಲಾಗಿದೆ- ಶಕ್ತಿಕಾಂತ ದಾಸ್: ”ಗಡಿಯಾಚೆಗಿನ ಪಾವತಿಗಳಿಗೆ ಸಂಬಂಧಿಸಿದಂತೆ ಹಾಗೂ ತಡೆರಹಿತ ಗಡಿಯಾಚೆಗಿನ ಪಾವತಿಗಳನ್ನು ಸರಳೀಕರಣಗೊಳಿಸಲು ಸಿಬಿಡಿಸಿಗಳಿಗೆ (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ) ಹೆಚ್ಚಿನ ಸಾಮರ್ಥ್ಯ ಇರುವುದನ್ನು ಗುರುತಿಸಲಾಗಿದೆ. ಈ ಕುರಿತ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯುವ ಅವಶ್ಯಕತೆಯಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ತಿಳಿಸಿದ್ದರು.

ಗುಜರಾತ್‌ನ ಗಾಂಧಿ ನಗರದಲ್ಲಿ ಇತ್ತೀಚೆಗೆ ನಡೆದ 3ನೇ ಜಿ-20 ಹಣಕಾಸು ಸಚಿವರು ಹಾಗೂ ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ತಿಳಿಸಿದ ಅವರು, ”ಗಡಿಯಾಚೆಗಿನ ಪಾವತಿಯನ್ನು ಪ್ರಸ್ತುತ ಸಾಕಷ್ಟು ದೇಶಗಳು ಗುರುತಿಸಿವೆ. ಜಿ-20 ರಾಷ್ಟ್ರದ ಸದಸ್ಯರು ಮತ್ತು ಇದಕ್ಕೆ ಸದಸ್ಯರಲ್ಲದ ದೇಶಗಳು ಒಪ್ಪಿವೆ ಎಂದು ಮಾಹಿತಿ ನೀಡಿದ್ದರು.2,66,491 ಕೋಟಿ ರೂ.ಗೆ ಇಳಿಕೆ ಕಂಡ ಎನ್​ಪಿಎ: ಕಳೆದ ಐದು ವರ್ಷಗಳಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ 20 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಕೆಟ್ಟ ಸಾಲದ ಪ್ರಮಾಣವು ಕಡಿಮೆಯಾಗಿದೆ ಎಂದು ರಿಸರ್ವ್ ಬ್ಯಾಂಕ್‌ನ ಅಂಕಿ – ಅಂಶಗಳು ತೋರಿಸುತ್ತವೆ. 2018- 19ರ ಆರ್ಥಿಕ ವರ್ಷದ ಅಂತ್ಯಕ್ಕೆ ಬಾಕಿ ಉಳಿದಿರುವ ಎನ್‌ಪಿಎ (ನಾನ್​ ಪರ್ಫಾರ್ಮಿಂಗ್ ಅಸೆಟ್) 7,09,907 ಕೋಟಿ ರೂ. ಇತ್ತು. ಆದರೆ, 2023ರ ಮಾರ್ಚ್ ನಲ್ಲಿ 2,66,491 ಕೋಟಿ ರೂ.ಗೆ ಇಳಿಕೆ ಕಂಡಿದೆ.