ಬೆಳಗಾವಿ: ಅಮೆರಿಕ ದೇಶದ ಪ್ರಸಿದ್ಧ ನಯಾಗರ ಜಲಪಾತವನ್ನು ಹೋಲುವುದರಿಂದ ಭಾರತದ ನಯಾಗಾರವೆಂದೇ ಕರೆಯಲ್ಪಡುವ ನಯನ ಮನೋಹರ ಗೋಕಾಕ್ ಫಾಲ್ಸ್ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಪಶ್ಚಿಮ ಘಟ್ಟದಲ್ಲಿ ಅಕ್ಷರಶಃ ವರುಣರಾಯ ಅಬ್ಬರಿಸುತ್ತಿದ್ದಾನೆ. ಜಿಲ್ಲೆಯ ಘಟಪ್ರಭಾ, ಹಿರಣ್ಯಕೇಶಿ ನದಿಗಳಿಗೆ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಅಪಾರ ಪ್ರಮಾಣದ ನೀರು ಗೋಕಾಕ್ ಫಾಲ್ಸ್ನತ್ತ ಹರಿದುಬರುತ್ತಿದೆ. 170 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತ ತನ್ನ ರುದ್ರ ರಮಣೀಯ ದೃಶ್ಯವನ್ನು ಪ್ರದರ್ಶಿಸುತ್ತಿದೆ.ಆಕರ್ಷಕ ದೃಶ್ಯ ಕಂಡು ಜನ ಪುಳಕಗೊಳ್ಳುತ್ತಿದ್ದಾರೆ. ಹಾಸುಗಲ್ಲುಗಳ ಮೇಲೆ ಹರಿದು ಬರುವ ಜಲಧಾರೆಯ ಸೊಬಗು ನೋಡುವುದೇ ಒಂದು ಸಡಗರ.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು, “ಸಮೀಪದಿಂದ ನೋಡಲು ಅವಕಾಶ ಕೊಟ್ಟಿದ್ದರೆ ಇನ್ನೂ ಒಳ್ಳೆಯದಾಗತ್ತಿತ್ತು. ಮುನ್ನೆಚ್ಚರಿಕೆಯ ಕಾರಣಕ್ಕೆ ದೂರದಿಂದಲೇ ನಿಂತು ನಿಸರ್ಗದ ಸೌಂದರ್ಯ ಸವಿಯುತ್ತಿದ್ದೇವೆ” ಎಂದರು.
“ಗೋಕಾಕ್ ಜಲಪಾತಕ್ಕೆ ಪ್ರತಿ ವರ್ಷವೂ ಬರುತ್ತೇವೆ. ಸುಂದರ ಜಲಪಾತವನ್ನು ನೋಡಲು ಕರ್ನಾಟಕದ ಮೂಲೆ ಮೂಲೆಯಿಂದಲೂ ಜನರು ಬರಬೇಕು. ಗೋಕಾಕ್ನ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಿ” ಎಂದು ಬೆಳಗಾವಿಯಿಂದ ಬಂದಿರುವ ಪ್ರವಾಸಿಗ ಮಂಜುನಾಥ್ ಹೇಳಿದರು. ಭಾನುವಾರ ವೀಕೆಂಡ್ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಗೋಕಾಕ್ ಫಾಲ್ಸ್ನಲ್ಲಿ ಜಮಾಯಿಸಿದ್ದರು. ಪ್ರಕೃತಿ ಸೌಂದರ್ಯ ನೋಡಿ ಜನರು ಸಂಭ್ರಮಿಸಿದರು. ಕುಟುಂಬಸಮೇತರಾಗಿ ಜನರು ಆಗಮಿಸಿದ್ದರು. ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ನೆರೆಯ ಮಹಾರಾಷ್ಟ್ರ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರು ಮೋಹಕ ದೃಶ್ಯ ಕಣ್ತುಂಬಿಕೊಂಡು ಎಂಜಾಯ್ ಮಾಡಿದರು.
ಮುಂಬೈಯಿಂದ ಆಗಮಿಸಿದ ಸುರೇಖಾ, “ಈ ಜಲಪಾತದ ಸೌಂದರ್ಯ ನೋಡಲು ಎರಡು ಕಣ್ಣುಗಳು ಸಾಲದು” ಎಂದರು. ಹುಬ್ಬಳ್ಳಿಯಿಂದ ಆಗಮಿಸಿದ ಹಿರಿಯ ವ್ಯಕ್ತಿಯೊಬ್ಬರು, “ಸರ್ಕಾರ ಜಲಪಾತವನ್ನು ಹತ್ತಿರದಿಂದ ನೋಡಲು ಒಪ್ಪಿಗೆ ನೀಡಿದ್ದರೆ ಇನ್ನೂ ಉತ್ತಮವಾಗಿತ್ತು” ಎಂದರು.ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ : ಜಲಪಾತವನ್ನು ಸಮೀಪದಿಂದ ನೋಡಲು ಪ್ರವಾಸಿಗರಿಗೆ ಅವಕಾಶ ನಿರ್ಬಂಧ ವಿಧಿಸಲಾಗಿದೆ. ಜಲಪಾತದ ತುದಿಗೆ ಬ್ಯಾರಿಕೇಡ್ ಹಾಕಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೀಗಾಗಿ, ದೂರದಿಂದಲೇ ಜನರು ಜಲಪಾತವನ್ನು ಆನಂದಿಸಬೇಕಿದೆ. ತಮಗೆ ನಿಗದಿಪಡಿಸಿದ್ದ ಸ್ಥಳದಲ್ಲೇ ನಿಂತುಕೊಂಡು ಯುವಕ, ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡು, ರೀಲ್ಸ್ ವಿಡಿಯೋ ಮಾಡಿಕೊಂಡು ಖುಷಿಪಡುತ್ತಿದ್ದರು