9 ದಿನದಲ್ಲಿ 60 ಕೋಟಿ ರೂ. ಕಲೆಕ್ಷನ್​ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ‘ಬೇಬಿ’

ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ನಟನೆಗೆ ಪ್ರೇಕ್ಷಕರು ತಲೆದೂಗಿದ್ದಾರೆ. ‘ಕಲರ್ ಫೋಟೋ’ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿರುವ ಸಾಯಿ ರಾಜೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.ಜುಲೈ​ 14 ರಂದು ತೆರೆಕಂಡ ‘ಬೇಬಿ’ ಸಿನಿಮಾ ಎಲ್ಲರ ನಿರೀಕ್ಷೆಯನ್ನೂ ಮೀರಿಸಿದ್ದು, ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಟಾಲಿವುಡ್​ ನಟ ವಿಜಯ್​ ದೇವರಕೊಂಡ ಸಹೋದರ ಆನಂದ್​ ದೇವರಕೊಂಡ ಅಭಿನಯದ ಈ ಚಿತ್ರ ಸೂಪರ್​ ಹಿಟ್​ ಆಗಿದೆ.
‘ಬೇಬಿ’ ಸಿನಿಮಾ ಒಂಬತ್ತು ದಿನಗಳಲ್ಲಿ ವಿಶ್ವದಾದ್ಯಂತ 60.3 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

‘ಬೇಬಿ’ ರಿಲೀಸ್​ ಆಗಿನಿಂದಲೂ ಕಂಟೆಂಟ್​ ಮಾತ್ರವಲ್ಲದೇ ಕಲೆಕ್ಷನ್​ ಸದ್ದು ಮಾಡುತ್ತ ಮುನ್ನುಗ್ಗುತ್ತಿದೆ. ಥಿಯೇಟರ್​ಗಳೂ ಹೌಸ್​ ಫುಲ್​ ಆಗಿವೆ. ಬಿಡುಗಡೆಗೂ ಮುನ್ನವೇ ಹಾಡುಗಳು ಮತ್ತು ಪ್ರಚಾರದ ಮೂಲಕವೇ ಈ ಚಿತ್ರ ಗಮನ ಸೆಳೆದಿತ್ತು. ಟೀಸರ್ ಮತ್ತು ಟ್ರೇಲರ್​ಗಳು ಕೂಡ ಯುವ ಜನತೆಗೆ ಇಷ್ಟವಾಗುವಂತೆ ಕಟ್ಟಿಕೊಡಲಾಗಿತ್ತು. ಸಿನಿ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದೀಗ ಹೊಸ ದಾಖಲೆ ಬರೆಯುವ ಮೂಲಕ ಮತ್ತೊಂದು ಮೈಲಿಗಲ್ಲು ದಾಟಿದೆ

ಚಿತ್ರಕಥೆ: ವೈಷ್ಣವಿ ಸ್ಲಂ ಏರಿಯಾದಲ್ಲಿ ಬೆಳೆದ ಹುಡುಗಿ. ಚಿಕ್ಕಂದಿನಿಂದಲೂ ತನ್ನ ಎದುರಿಗಿರುವ ಆನಂದ್​ನನ್ನು ಪ್ರೀತಿಸುತ್ತಿರುತ್ತಾಳೆ. ಇವರಿಬ್ಬರ ಪ್ರೀತಿ ಶಾಲಾ ದಿನಗಳಿಂದಲೇ ಶುರುವಾಗಿ ಒಂದು ಹಂತಕ್ಕೆ ತಲುಪುತ್ತದೆ. ಆದರೆ ಹತ್ತನೇ ತರಗತಿಯಲ್ಲಿ ಆನಂದ್​ ಫೇಲ್​ ಆದ ಕಾರಣ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡಲು ಆರಂಭಿಸುತ್ತಾನೆ. ವೈಷ್ಣವಿ ಖಾಸಗಿ ಇಂಜಿನಿಯರಿಂಗ್​ ಕಾಲೇಜಿಗೆ ಸೇರುತ್ತಾಳೆ. ಅಲ್ಲಿಯ ಹೊಸ ಪರಿಚಯಗಳು ವೈಶು ಆಲೋಚನಾ ವಿಧಾನವನ್ನು ಬದಲಾಯಿಸಿಬಿಡುತ್ತದೆ. ಹೀಗೆ ಆಕೆ ತನ್ನ ಸಹಪಾಠಿ ವಿರಾಜ್​ಗೆ ಹತ್ತಿರವಾಗುತ್ತಾಳೆ.

ಗೆಳೆತನದ ಹೆಸರಿನಲ್ಲಿ ಶುರುವಾದ ಈ ಸಂಬಂಧ ಪ್ರೇಮಕ್ಕೆ ತಿರುಗುತ್ತದೆ. ಅನಿರೀಕ್ಷಿತ ಸಂದರ್ಭಗಳಿಂದ ವೈಷ್ಣವಿ ವಿರಾಜ್​ಗೆ ದೈಹಿಕವಾಗಿ ಹತ್ತಿರವಾಗುತ್ತಾಳೆ. ಅದರ ನಂತರ ಏನಾಗುತ್ತದೆ? ಸತ್ಯ ತಿಳಿದಾಗ ಆನಂದ್​ ಪ್ರತಿಕ್ರಿಯೆ ಏನು? ಎಂಬುದು ಉಳಿದ ಕಥೆ. ಅಪರಿಚಿತ ವಯಸ್ಸಿನಲ್ಲಿ ಹುಟ್ಟುಕೊಂಡ ಪ್ರೇಮಕಥೆ ಅವರು ದೊಡ್ಡವರಾದಂತೆ ಯಾವ ತಿರುವನ್ನು ಪಡೆದುಕೊಂಡು ಎಲ್ಲಿಗೆ ತಲುಪುತ್ತದೆ ಅನ್ನೋದೇ ಕಥೆ.

60.3 ಕೋಟಿ ರೂಪಾಯಿ ಕಲೆಕ್ಷನ್​.. ಈ ಚಿತ್ರ ಬಿಡುಗಡೆಯಾದ ಮೊದಲ ದಿನ (ಜುಲೈ 14) 7.1 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಎರಡನೇ ದಿನ 7.2 ಕೋಟಿ ರೂಪಾಯಿ ಗಳಿಸಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವುದರ ಜೊತೆಗೆ ಒಂಬತ್ತು ದಿನಗಳಲ್ಲಿ ವಿಶ್ವದಾದ್ಯಂತ 60.3 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ವಿಚಾರವನ್ನು ನಿರ್ದೇಶಕ ಸಾಯಿ ರಾಜೇಶ್​ ಟ್ವೀಟ್​ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

ಸಿನಿಮಾದಲ್ಲಿ ಕಂಡುಬರುವ ಬಹುತೇಕ ದೃಶ್ಯಗಳು ಯುವಕ-ಯುವತಿಯರ ನಡುವಿನ ಪ್ರೀತಿ ಮತ್ತು ಅವರ ಆಲೋಚನಾ ಕ್ರಮದ ಪ್ರತಿಬಿಂಬವಾಗಿದೆ. ಆನಂದ್ ಅವರನ್ನು ಭಗ್ನ ಪ್ರೇಮಿ ಎಂದು ಪರಿಚಯಿಸಿದ ರೀತಿ, ಅವರ ದೃಷ್ಟಿಕೋನದಿಂದ ಮೂಲ ಕಥೆಯನ್ನು ಆರಂಭಿಸಿದ ರೀತಿ ತುಂಬಾ ಚೆನ್ನಾಗಿದೆ. ಪದಗಳಿಲ್ಲದಿದ್ದರೂ ಭಾವಾಭಿನಯ ಮತ್ತು ಹಿನ್ನೆಲೆ ಸಂಗೀತದ ಮೂಲಕ ಅವರ ಪ್ರೀತಿಯನ್ನು ಹೈಲೈಟ್ ಮಾಡಿರುವ ರೀತಿ ಆಕರ್ಷಕವಾಗಿದೆ.