ಮಣಿಪಾಲ: ಮಣಿಪಾಲದ ಡಾ. ಕೃಷ್ಣ ಲೈಫ್ ಸೈನ್ಸಸ್ ಲಿಮಿಟೆಡ್ ನ ಎಂ.ಡಿ ಡಾ. ಎಂ. ವಿಜಯಭಾನು ಶೆಟ್ಟಿಯವರು ಅಭಿವೃದ್ಧಿ ಪಡಿಸಿದ ಅಲ್ಝೈಮರ್ಸ್ ಮತ್ತು ಪಾರ್ಕಿನ್‍ಸೋನಿಸಮ್‍ನ ಆಯುರ್ವೇದ ಔಷಧಿ ಮುನಿಪ್ರಜ್ಞಾ ಮಾತ್ರೆಗಳಿಗೆ ಅಮೆರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಆ್ಯಂಡ್ ಟ್ರೇಡ್ ಮಾರ್ಕ್ ಆಫೀಸಿನಿಂದ ಪೇಟೆಂಟ್ ಲಭಿಸಿರುತ್ತದೆ.
ಇವರು ತಯಾರಿಸಿದ ಸಿಹಿಮೂತ್ರ ರೋಗದ ಇನ್ಸೋಲ್-ಎನ್, ಹೃದಯ ರಕ್ಷಣೆಯ ಹಾರ್ಟೋಜನ್, ಕ್ಯಾನ್ಸರ್ ಕಾಯಿಲೆ ಚಿಕಿತ್ಸೆಯ ಮುನೆಕ್ಸ್, ಮೂತ್ರಕೋಶದ ತೊಂದರೆಗಳಿಗೆ ಮುನಿಪ್ರಭಾ, ಮಾದಕದ್ರವ್ಯ ಚಟಬಿಡಿಸುವ ಹರ್ಬಾಡಿಕ್ಟ್, ಲಿಪಿಡ್ ಕೊಲೆಸ್ಟ್ರಾಲ್ ಹಿಡಿತದಲ್ಲಿಡುವ ಹರ್ಬೋಟ್ರಿಮ್, ಥೈರಾಯ್ಡ್ ತೊಂದರೆ ಶಮನದ ಮುನಿಥೈರಾನ್, ಗರ್ಭಾಶಯದ ಕಾಯಿಲೆಗೆ ಸೌಭಾಗ್ಯ ಕಲ್ಪ, ಹಲ್ಲು ಮತ್ತು ಒಸಡಿನ ರಕ್ಷಣೆಗೆ ಮುನಿಡೆಂಟ್, ರೋಗ ನಿರೋಧಕ ಶಕ್ತಿ ವೃದ್ಧಿಗೆ ಹಿರಣ್ಯಪ್ರಾಶ ಬಿಂದುಗಳು ಹಾಗೂ ಕ್ಯಾನ್ಸರ್ ಚಿಕಿತ್ಸಾಕ್ರಮವಾದ ಮಹೋಷದ ಕಲ್ಪ ಮೊದಲಾದವುಗಳಿಗೆ ಈಗಾಗಲೇ ಇಪ್ಪತ್ತು ವರ್ಷಗಳ ಅಮೆರಿಕಾ ಸರಕಾರದ ಪೇಟೆಂಟ್ ದೊರೆತಿದ್ದು, ಈ ಸಾಧನೆ ಆಯುರ್ವೇದದ ಇತಿಹಾಸದಲ್ಲೇ ಅಪರೂಪವೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮುನಿಯಾಲು ಆಯುರ್ವೇದ ಸಂಸ್ಥೆಯು ಮಣಿಪಾಲದಲ್ಲಿ ಕಾಲೇಜು, ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ಕೋರ್ಸುಗಳು, ಯೋಗ ಮತ್ತು ನ್ಯಾಚುರೋಪತಿ ಕಾಲೇಜು, ಆಸ್ಪತ್ರೆಗಳು, ಚಿಕಿತ್ಸಾಲಯಗಳನ್ನು ನಡೆಸುತ್ತಿದ್ದು, ಸಂಸ್ಥೆಯ ಶ್ರೇಷ್ಠ ಪ್ರಕಟಣೆಯಾದ ಸಚಿತ್ರ ಚರಕ ಸಂಹಿತವನ್ನು ರಾಷ್ಟ್ರಪತಿ ಅಬ್ದುಲ್ ಕಲಾಮರು ಬಿಡುಗಡೆಗೊಳಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.