ಹಾಸನ: ಜಿಲ್ಲೆಯ ವ್ಯಕ್ತಿಯೊಬ್ಬರು 9 ತಿಂಗಳ ಚಿರತೆ ಮರಿಯನ್ನು ತನ್ನ ದ್ವಿಚಕ್ರ ವಾಹನದ ಹಿಂಬದಿಗೆ ಕಟ್ಟಿಕೊಂಡು ಹೋಗುತ್ತಿರುವ ದೃಶ್ಯವೊಂದು ಕಂಡುಬಂದಿದೆ. ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರವಾಹನದಲ್ಲಿ ಚಿರತೆಯೊಂದನ್ನು ಕಟ್ಟಿಹಾಕಿ ಸವಾರಿ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಹಾಸನ ಜಿಲ್ಲೆಯ ಬಾಗಿವಾಳು ಗ್ರಾಮದ ವೇಣುಗೋಪಾಲ್ ಅಲಿಯಾಸ್ ಮುತ್ತು ಎಂದು ಗುರುತಿಸಲಾಗಿರುವ ಈ ಸವಾರ ತಾನು ಚಿರತೆಯನ್ನು ಅರಣ್ಯ ಇಲಾಖೆಗೆ ಕರೆದೊಯ್ಯುತ್ತಿದುದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗೀವಾಳು ಗ್ರಾಮಕ್ಕೆ ನುಗ್ಗಿದ ಚಿರತೆ ಜಮೀನಿಗೆ ಹೋಗುತ್ತಿದ್ದ ಯುವಕನ ಮೇಲೆ ದಾಳಿ ಮಾಡಿದೆ. ದಾಳಿ ಮಾಡಿದ ಚಿರತೆಯನ್ನು ಯುವಕ ಓಡಿಸಲು ಯತ್ನಿಸಿದ್ದಾನೆ. ಚಿರತೆ ಪುನಃ ದಾಳಿ ಮಾಡಿದಾಗ ಮುತ್ತು ಕೈಕಾಲು, ದೇಹಕ್ಕೆ ಪೆಟ್ಟು ಬಿದ್ದಿದ್ದರೂ ಚಿರತೆಯೊಂದಿಗೆ ಸೆಣಸಾಟ ನಡೆಸಿದ್ದಾನೆ. ಜಮೀನಿಗೆ ತೆಗೆದುಕೊಂಡು ಹೋಗುತ್ತಿದ್ದ ಬೈಕ್ ನಲ್ಲಿದ್ದ ಹಗ್ಗವನ್ನು ಎತ್ತಿಕೊಂಡು ಚಿರತೆ ದಾಳಿ ಮಾಡಲು ಮುಂದಾದಾಗ ಅದಕ್ಕೆ ಕುಣಿಕೆ ಹಾಕಿ ಬಿಗಿದಿದ್ದಾನೆ. ಈ ವೇಳೆ ಚಿರತೆಯ ಕಾಲುಗಳು ಹಾಗೂ ದೇಹವನ್ನು ಹಗ್ಗದಿಂದ ಬಿಗಿದು ದಾಳಿ ಮಾಡಲು ಸಾಧ್ಯವಾಗದ ರೀತಿಯಲ್ಲಿ ಕಟ್ಟಿ ತನ್ನ ದ್ವಿಚಕ್ರ ವಾಹನದ ಹಿಂಬಾಗಕ್ಕೆ ಕಟ್ಟಿಹಾಕಿ ಗ್ರಾಮದಲ್ಲಿದ್ದ ಅರಣ್ಯ ಇಲಾಖೆ ಕಚೇರಿಯತ್ತ ತೆರಳಿ ಚಿರತೆಯನ್ನು ಒಪ್ಪಿಸಿದ್ದಾನೆ.
ಮುತ್ತುವಿಗೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಚಿರತೆ ಬಲಹೀನವಾಗಿದ್ದು, ಅಪಾಯಕಾರಿಯಾಗಿರಲಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದು ಪ್ರಸ್ತುತ ನಿಗಾದಲ್ಲಿ ಇರಿಸಲಾಗಿದೆ. ಏತನ್ಮಧ್ಯೆ, ಇದೇ ರೀತಿಯ ಘಟನೆಗಳನ್ನು ನಿರ್ವಹಿಸುವ ಬಗ್ಗೆ ಹೆಚ್ಚಿನ ಅರಿವು ನೀಡಲು ಮುತ್ತು ಅವರನ್ನು ಕೌನ್ಸೆಲಿಂಗ್ ಸೆಷನ್ಗೆ ಕಳುಹಿಸಲಾಗಿದೆ ಎಂದು ಮಾಧ್ಯಮ ವರದಿ ಹೇಳಿದೆ.