ಉಡುಪಿ: ಕಟಪಾಡಿ ಗ್ರಾ.ಪಂ. ವ್ಯಾಪ್ತಿಯ ಚಾಕಡಿ ರೈಲ್ವೆ ಬ್ರಿಡ್ಜ್ ಬಳಿಯ ಈಶ್ವರ ದೇವಸ್ಥಾನದ ( ಸುಭಾಷ್ ನಗರ ಮತ್ತು ಕಟಪಾಡಿ ರಸ್ತೆ ) ಸಮೀಪದಲ್ಲಿ ಸಾರ್ವಜನಿಕ ಸ್ಥಳದಲ್ಲೇ ತ್ಯಾಜ್ಯ ರಾಶಿ ಹಾಕಲಾಗುತ್ತಿದ್ದು, ಇದರಿಂದಾಗಿ ಸ್ಥಳೀಯರು, ಸಾರ್ವಜನಿಕರಿಗೆ ಭಾರಿ ಸಮಸ್ಯೆ ಎದುರಾಗಿದೆ.
ಕಳೆದ ಹಲವು ಸಮಯದಿಂದ ಈ ತ್ಯಾಜ್ಯ ರಾಶಿ ಇಲ್ಲಿದ್ದು, ಇದೀಗ ಮಳೆಗೆ ಮತ್ತಷ್ಟು ಸಮಸ್ಯೆ ಉದ್ಬವಾಗುತ್ತಿದೆ. ಬೇರೆ ಭಾಗಗಳಿಂದ ಕಸ ತ್ಯಾಜ್ಯಗಳನ್ನು ತಂದು ಯಾರೋ ಸಾರ್ವಜನಿಕರೇ ಈ ಪ್ರದೇಶದಲ್ಲಿ ಹಾಕುತ್ತಿದ್ದಾರೆ.
ಹೋಟೆಲ್, ರೆಸ್ಟೋರೆಂಟ್ ಗಳ ತ್ಯಾಜ್ಯ, ಮನೆಗಳ ತ್ಯಾಜ್ಯ, ಕೊಳೆತ ತರಕಾರಿ, ಪ್ಲಾಸ್ಟಿಕ್ ವಸ್ತುಗಳು ಹೀಗೆ ನಾನಾ ತರದ ತ್ಯಾಜ್ಯಗಳನ್ನು ಅಲ್ಲೇ ತಂದು ಎಸೆಯಲಾಗುತ್ತಿದೆ.
ಹಲವು ಭಾರಿ ಸ್ವಚ್ಚತೆ:
ಈ ಪ್ರದೇಶದಲ್ಲಿ ತ್ಯಾಜ್ಯ ಹಾಕಿರುವುದನ್ನು ಪಂಚಾಯತ್ ಹಾಗೂ ಸ್ಥಳೀಯರ ಸಹಕಾರದಿಂದ ಈಗಾಗಲೇ ಹಲವು ಭಾರಿ ಸ್ವಚ್ಚಗೊಳಿಸಲಾಗಿದೆ. ಆದರೆ ಯಾರೋ ದುರುಳರು ಮತ್ತೆ ಮತ್ತೆ ಅಲ್ಲೆ ತ್ಯಾಜ್ಯ ಎಸೆಯುವುದು ವಾಡಿಕೆಯಾಗಿದೆ. ಈ ತ್ಯಾಜ್ಯದಿಂದಾಗಿ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗದ ಭೀತಿಯೂ ಉಂಟಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ತ್ಯಾಜ್ಯ ಎಸೆಯುವುದು ನ್ಯಾಯವೇ?
ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ:
ಇದು ಪ್ರಮುಖ ರಸ್ತೆಯಾದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ವಿದ್ಯಾರ್ಥಿಗಳು, ಉದ್ಯೋಗಸ್ಥರು ಅಲ್ಲೇ ಬಸ್ಸಿಗಾಗಿ ಕಾಯುತ್ತಾರೆ. ಅನತಿ ದೂರದಲ್ಲೇ ಅಂಗನವಾಡಿ, ಮಸೀದಿ ಇದೆ. ಅಲ್ಲಿಗೆ ಭೇಟಿ ನೀಡುವರು ಪ್ರತಿನಿತ್ಯ ತೊಂದರೆ ಎದುರಿಸುವಂತಾಗಿದೆ. ಮಳೆಗಾಲವಾದ್ದರಿಂದ ಆ ತ್ಯಾಜ್ಯ ರಸ್ತೆಗೆ ಬಂದು ಹಲವು ರೀತಿಯಲ್ಲಿ ಸಮಸ್ಯೆ ಗೆ ಕಾರಣವಾಗಿದೆ.
ಸ್ಥಳೀಯರ ಆಗ್ರಹ:
ಈ ಭಾಗದಲ್ಲಿ ತ್ಯಾಜ್ಯ ಹಾಕುವವರು ಯರೋ ದೂರದಿಂದ ಬಂದವರಲ್ಲ. ಹೀಗಾಗಿ ಅವರಿಗೆ ತ್ಯಾಜ್ಯ ಹಾಕದಂತೆ ಎಚ್ಚರಿಕೆ ನೀಡಬೇಕು. ಜತೆಗೆ ಅರಿವು ಮೂಡಿಸಬೇಕು. ಈ ಬಗ್ಗೆ ಸಂಬಂಧಿಕರು ಸೂಕ್ತ ಕ್ರಮ ಕೈಗೊಳ್ಳಬೇಕು. ಸದ್ಯ ರಾಶಿ ಬಿದ್ದಿರುವುದನ್ನು ತೆರವುಗೊಳಿಸಬೇಕು. ಹೇಗಾದರೂ ಅಲ್ಲಿ ತ್ಯಾಜ್ಯ ಹಾಕುವುದನ್ನು ತಡೆಯಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.