ಉಡುಪಿ: ಇಲ್ಲಿನ ಮಠದಬೆಟ್ಟು ಎಂಬಲ್ಲಿ ಜೂ.29ರಂದು ಕಾಲುಸಂಕದಿಂದ ಆಕಸ್ಮಿಕವಾಗಿ ಜಾರಿ ಮಳೆನೀರು ಹರಿದು ಹೋಗುವ ಚರಂಡಿಗೆ ಬಿದ್ದು 33 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಬೈಂದೂರು ಮೂಲದ ಸತೀಶ್ (33) ಎಂದು ಗುರುತಿಸಲಾಗಿದೆ. ಈತ ಉಡುಪಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ.
ಬುಧವಾರ ಮಧ್ಯಾಹ್ನದಿಂದ ಸತೀಶ್ ನಾಪತ್ತೆಯಾಗಿದ್ದು, ಗುರುವಾರ ಆತನ ಶವ ಮಳೆನೀರು ಹರಿಯುವ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಳುಗು ತಜ್ಞ ಈಶ್ವರ ಮಲ್ಪೆ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲು ಸಮಾಜ ಸೇವಕ ನಿತ್ಯಾನಂದ ವೊಳಕಾಡು ಸಹಕರಿಸಿದ್ದಾರೆ.
ಸತೀಶ್ ಅವರು ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.