ನವೀಕೃತ ಶ್ರೀ ಕೃಷ್ಣ ಛತ್ರ ಲೋಕಾರ್ಪಣೆ

ಉಡುಪಿ: ಪರ್ಯಾಯ ಶ್ರೀ‌ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯ ಅವಧಿಯಲ್ಲಿ ಕೆನರಾ ಬ್ಯಾಂಕ್ ಮತ್ತು ಭಕ್ತರ ನೆರವಿನೊಂದಿಗೆ ಶ್ರೀ ಕೃಷ್ಣಮಠದ ರಾಜಾಂಗಣಕ್ಕೆ ಹೊಂದಿಕೊಂಡು ಇರುವ ನವೀಕೃತ ಶ್ರೀ ಕೃಷ್ಣ ಛತ್ರವನ್ನು ಇತರೆ ಮಠಾಧೀಶರ ಉಪಸ್ಥಿತಿಯಲ್ಲಿ ಬುಧವಾರ ಶ್ರೀ ಕೃಷ್ಣನಿಗೆ ಸಮರ್ಪಿಸಿದರು. ಬಳಿಕ ಮಠದ ಪುರೋಹಿತ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನೆರವೇರಿದವು.

ಸದ್ರಿ ಛತ್ರವು 1966 ರಲ್ಲಿ ಆಗಿನ ಶೀರೂರು ಮಠಾಧೀಶರಿಂದ ನಿರ್ಮಸಲ್ಪಟ್ಟು ಪ್ರಸ್ತುತ ಶಿಥಿಲಗೊಂಡಿತ್ತು. ಇದೀಗ ಸಮಾರು 3.5 ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ನವೀಕರಿಸಲಾಗಿದೆ. ಕೆಳ ಅಂತಸ್ತಿನಲ್ಲಿ ಅತೀ ಗಣ್ಯರಿಗೆ ವಿಶ್ರಾಂತಿಗಾಗಿ ಒಂದು ಸುಸಜ್ಜಿತ ಕೋಣೆ, ಕಲಾವಿದರಿಗೆ ವಿಶಾಲವಾದ ಗ್ರೀನ್ ರೂಮ್, ಪತ್ರಿಕೆ/ಮಾಧ್ಯಮದವರಿಗೆ ವಿಶ್ರಾಂತಿ ಕೋಣೆ, ಮೇಲಿನ‌ ಎರಡು ಮಹಡಿಗಳಲ್ಲಿ ಮಠದ ಸಿಬಂದಿಗಳಿಗೆ 28 ಕೋಣೆಗಳು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಶೌಚಗೃಹಗಳನ್ನು ನಿರ್ಮಿಸಲಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಯೂರು, ಅದಮಾರು ಕಿರಿಯ, ಶೀರೂರು ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು.

ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶನ ನೀಡಿದ ಇಂಜಿನಿಯರ್ ಯುಕೆ ರಾಘವೇಂದ್ರ ರಾವ್ , ಆರ್ಕಿಟೆಕ್ಟ್ ರಾಜೇಂದ್ರ ಮಯ್ಯ , ಗುತ್ತಿಗೆದಾರ ಗಂಗಾಧರ ರಾವ್ , ಇಲೆಕ್ಟ್ರಿಕಲ್ ಗುತ್ತಿಗೆದಾರರ ವೆಂಕಟಕೃಷ್ಣ ಐತಾಳ್ , ದಾನಿ ಎಂ.ಎಂ ಭಟ್ , ವಾದಿರಾಜ ಆಚಾರ್ಯ ಮೊದಲಾದವರನ್ನು ಶ್ರೀಪಾದರು ಸನ್ಮಾನಿಸಿದರು.

ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಸ್ವಾಗತಿಸಿದರು. ರಾಘವೇಂದ್ರ ರಾವ್ ಪ್ರಸ್ತಾವಿಸಿದರು. ರಾಘವೇಂದ್ರ ಉಪಾಧ್ಯಾಯ ಪಾರ್ಥಿಸಿದರು. ಬಿ ಗೋಪಾಲಕೃಷ್ಣ ಉಪಾಧ್ಯಾಯ ನಿರೂಪಿಸಿದರು.

ದಿವಾನ ವರದರಾಜ ಭಟ್ , ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯ , ರವಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.