ಬೆಂಗಳೂರು: ವಿಪಕ್ಷ ನಾಯಕನ ಸ್ಥಾನ ಮತ್ತಿತರ ಹುದ್ದೆಗೆ ಸಂಬಂಧಿಸಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿಯು ಸೂಕ್ತ ಸಮಯದಲ್ಲಿ ಸಮರ್ಥ ನಿರ್ಧಾರವನ್ನು ಪ್ರಕಟಿಸಲಿದೆ.ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನೇಮಕ ಕುರಿತು ಪಕ್ಷದ ನಾಯಕರು ಹೇಳಿಕೆಗಳನ್ನು ನೀಡಿ ಪಕ್ಷದ ಘನತೆಗೆ ಧಕ್ಕೆ ತರಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸೂಚಿಸಿದ್ದಾರೆ.
ಪಕ್ಷದ ಆಂತರಿಕ ವಿಷಯಗಳನ್ನು ಮಾಧ್ಯಮಗಳ ಮುಂದೆ ಚರ್ಚಿಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.
ಪಕ್ಷದ ಕೆಲವು ನಾಯಕರು ಈ ನಡುವೆ ಮಾಧ್ಯಮಗಳ ಮುಂದೆ ವಿವಿಧ ಹುದ್ದೆ ಕುರಿತು ಆಕಾಂಕ್ಷೆ ವ್ಯಕ್ತಪಡಿಸುವುದು ಗಮನಕ್ಕೆ ಬಂದಿದೆ. ಅಲ್ಲದೆ, ಪಕ್ಷದ ಸಭೆಗಳಲ್ಲಿ ಈ ವಿಷಯವಾಗಿ ಚರ್ಚಿಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಪಕ್ಷದ ಘನತೆಗೆ ಧಕ್ಕೆ ಉಂಟಾಗದಂತೆ ನಾಯಕರು ನೋಡಿಕೊಳ್ಳಬೇಕು. ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಚರ್ಚಿಸುವುದು ಸೂಕ್ತವಲ್ಲ ಎಂದು ಸೂಚಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಕೆಲ ಬಿಜೆಪಿ ನಾಯಕರು ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ವಿ.ಸೋಮಣ್ಣ ಮಾಧ್ಯಮಗಳ ಮುಂದೆ ತಮಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಆಸೆ ವ್ಯಕ್ತಪಡಿಸಿದ್ದರು. ಈ ಸಂಬಂಧ ಹೈಕಮಾಂಡ್ ಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದರು. ಇತ್ತ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಕೂಡ ವಿರೋಧ ಪಕ್ಷ ನಾಯಕನ ಸ್ಥಾನಕ್ಕಾಗಿ ತಮ್ಮ ಒಲವು ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆರ್. ಅಶೋಕ್, ಸಿ.ಟಿ. ರವಿ, ವಿ. ಸೋಮಣ್ಣ, ಅಶ್ವತ್ಥನಾರಾಯಣ್ ಹೆಸರುಗಳು ಕೇಳಿ ಬರುತ್ತಿವೆ. ಇತ್ತ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬೊಮ್ಮಾಯಿ, ಬಸನಗೌಡ ಯತ್ನಾಳ್ ಹೆಸರು ಮುನ್ನಲೆಯಲ್ಲಿದೆ. ಮುಂದಿನ ವಾರದಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಹೀಗಾಗಿ ಈ ವಾರಾಂತ್ಯಕ್ಕೆ ಪ್ರತಿಪಕ್ಷ ನಾಯಕನನ್ನು ಬಿಜೆಪಿ ಹೈಕಮಾಂಡ್ ಆರಿಸಲಿದೆ ಎಂದು ಹೇಳಲಾಗಿದೆ.
ಈ ಹೇಳಿಕೆಗಳಿಂದ ಪಕ್ಷ ಮುಜುಗರಕ್ಕೀಡಾಗಿತ್ತು. ಕಾರ್ಯಕರ್ತರ ಸಭೆಗಳಲ್ಲೂ ನಾಯಕರುಗಳು ತಮ್ಮ ಆಕಾಂಕ್ಷೆಯನ್ನು ಹೊರಗೆಡವುತ್ತಿದ್ದಾರೆ. ಇದರಿಂದ ಕಾರ್ಯಕರ್ತರಲ್ಲೂ ಗೊಂದಲ, ಘರ್ಷಣೆ ಉಂಟಾಗಲು ಕಾರಣವಾಗಿತ್ತು. ಜೊತೆಗೆ ಪಕ್ಷಕ್ಕೂ ಮುಜುಗರ ಉಂಟಾಗಿತ್ತು. ಈ ಎಲ್ಲಾ ಕಾರಣಗಳಿಗೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ನಾಯಕರುಗಳಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಇಂಥ ಹೇಳಿಕೆಗಳಿಂದ ಪಕ್ಷದ ಘನತೆಗೆ ಧಕ್ಕೆ ಉಂಟಾಗುತ್ತಿದ್ದು, ಬಹಿರಂಗ ಹೇಳಿಕೆಗಳನ್ನು ಕೊಡದಂತೆ ಸೂಚಿಸಿದ್ದಾರೆ. ಹೈಕಮಾಂಡ್ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಮಾಧ್ಯಮಗಳಲ್ಲಿ ಪ್ರತಿಪಕ್ಷ ನಾಯಕ ಸ್ಥಾನ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಂಬಂಧ ಹೇಳಿಕೆಗಳನ್ನು ನೀಡದಂತೆ ಹಾಗೂ ಸಭೆಗಳಲ್ಲಿ ಚರ್ಚಿಸದಂತೆ ಸೂಚನೆ ನೀಡಿದ್ದಾರೆ.