ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಲಾದುವುದು ಎಂದ ಪುತಿನ್

ಮಾಸ್ಕೋ: ವ್ಯಾಗ್ನರ್ ಖಾಸಗಿ ಮಿಲಿಟರಿ ದಂಗೆಯನ್ನು ವಿಫಲಗೊಳಿಸಿದ ನಂತರ, ಸೋಮವಾರದಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್, ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಯಾವುದೇ ಪ್ರಯತ್ನವು ವಿಫಲಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ರಷ್ಯನ್ನರು ಪರಸ್ಪರರನ್ನು ಕೊಲ್ಲಬೇಕೆಂದು ಪಶ್ಚಿಮ ದೇಶಗಳು ಮತ್ತು ಕೈವ್ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ.

ಶನಿವಾರದಂದು ಪ್ರಾರಂಭವಾದ ಶಸ್ತ್ರಸಜ್ಜಿತ ಖಾಸಗಿ ಸೈನಿಕರ ದಂಗೆಯು 24 ಗಂಟೆಗಳಿಗೂ ಮೊದಲೆ ಕೊನೆಗೊಂಡಿತು.

ಸೋಮವಾರ ರಾಷ್ಟ್ರವನ್ನುದ್ದೇಶಿಸಿ ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಪುತಿನ್, ಘಟನೆಗಳು ಪ್ರಾರಂಭವಾದಾಗಿನಿಂದಲೂ ದೊಡ್ಡ ಪ್ರಮಾಣದ ರಕ್ತಪಾತವನ್ನು ತಪ್ಪಿಸಲು ಅವರ ಆದೇಶದ ಮೇರೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಸಹಿಷ್ಣುತೆ ಮತ್ತು ಬೆಂಬಲಕ್ಕಾಗಿ ರಷ್ಯನ್ನರಿಗೆ ಧನ್ಯವಾದ ಅರ್ಪಿಸಿದರು.

“ರಷ್ಯಾದ ಶತ್ರುಗಳು ನಿಖರವಾಗಿ ಈ ಸಹೋದರ ಹತ್ಯೆಯನ್ನು ಬಯಸಿದ್ದರು: ಕೈವ್‌ನಲ್ಲಿರುವ ನವ-ನಾಜಿಗಳು ಮತ್ತು ಅವರ ಪಾಶ್ಚಿಮಾತ್ಯ ಪೋಷಕರು ಮತ್ತು ಎಲ್ಲಾ ರೀತಿಯ ರಾಷ್ಟ್ರೀಯ ದ್ರೋಹಿಗಳು. ರಷ್ಯಾದ ಸೈನಿಕರು ಒಬ್ಬರನ್ನೊಬ್ಬರು ಕೊಲ್ಲಬೇಕೆಂದು ಅವರು ಬಯಸಿದ್ದರು. ಯಾವುದೇ ಬ್ಲ್ಯಾಕ್‌ಮೇಲ್, ಆಂತರಿಕ ಪ್ರಕ್ಷುಬ್ಧತೆಯನ್ನು ಉಂಟುಮಾಡುವ ಪ್ರಯತ್ನಗಳು ವಿಫಲಗೊಳ್ಳುತ್ತವೆ” ಎಂದು ಅವರು ಹೆಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.

ರಷ್ಯಾದ ಅಧ್ಯಕ್ಷರು ತಮ್ಮ ಮಾತನ್ನು ಉಳಿಸಿಕೊಳ್ಳುವುದಾಗಿ ಹೇಳಿದರು ಹಾಗೂ ವ್ಯಾಗ್ನರ್ ಹೋರಾಟಗಾರರು ಬಯಸಿದಲ್ಲಿ ಬೆಲಾರಸ್‌ಗೆ ತೆರಳಬಹುದು ಅಥವಾ ರಕ್ಷಣಾ ಸಚಿವಾಲಯ ಅಥವಾ ಇತರ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಒಪ್ಪಂದದ ಮೂಲಕ ರಷ್ಯಾದ ಸೇವೆಯನ್ನು ಮುಂದುವರಿಸಬಹುದು ಎಂದರು.

ಏತನ್ಮಧ್ಯೆ, ಸೋಮವಾರ, ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಮಾಸ್ಕೋ ಕಡೆಗೆ ತೆರಳಿದ ಉದ್ದೇಶ ವ್ಯಾಗ್ನರ್ ಖಾಸಗಿ ಮಿಲಿಟರಿ ಕಂಪನಿಯ ನಾಶವನ್ನು ನಿಲ್ಲಿಸುವುದು ಮತ್ತು ತಮ್ಮ ವೃತ್ತಿಪರವಲ್ಲದ ಕ್ರಮಗಳ ಮೂಲಕ ವಿಶೇಷ ಮಿಲಿಟರಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ತಪ್ಪುಗಳನ್ನು ಮಾಡಿದವರನ್ನು ನ್ಯಾಯ ವ್ಯವಸ್ಥೆಯಡಿ ತರುವುದಾಗಿತ್ತು. ಮೆರವಣಿಗೆಯು ಪ್ರತಿಭಟನೆಯ ಪ್ರದರ್ಶನವಾಗಿದೆ ಮತ್ತು ಅಧಿಕಾರವನ್ನು ಉರುಳಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಅವರು ಹೇಳಿದರು.