ದೆಹಲಿ: ಬಂದೂಕು ತೋರಿಸಿ ದಂಪತಿಯನ್ನು ದರೋಡೆ ಮಾಡಲು ಬಂದವರೆ 100 ರೂ. ಕೊಟ್ಟು ಪರಾರಿ!!

ನವದೆಹಲಿ: ವಿಲಕ್ಷಣ ಘಟನೆಯೊಂದರಲ್ಲಿ, ಬಂದೂಕು ತೋರಿಸಿ ದಂಪತಿಯನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ ದೆಹಲಿಯ ಇಬ್ಬರು ದರೋಡೆಕೋರರು ಸ್ವತಃ ತಾವೇ ದಂಪತಿಗಳಿಗೆ 100 ರೂಪಾಯಿಗಳನ್ನು ನೀಡಿ ಅವರಿಗೆ ಯಾವುದೇ ಹಾನಿ ಮಾಡದೆ ಸ್ಥಳದಿಂದ ನಿರ್ಗಮಿಸಿದ್ದಾರೆ.

ಜೂನ್ 21 ರಂದು ಪೂರ್ವ ದೆಹಲಿಯ ಶಾಹದಾರದ ಫಾರ್ಶ್ ಬಜಾರ್ ಪ್ರದೇಶದಲ್ಲಿ ಈ ದರೋಡೆಕೋರರು ಮತ್ತು ಅವರ ದರೋಡೆಯ ಯತ್ನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿ ದಂಪತಿಯ ಬಳಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸುವುದನ್ನು ದೃಶ್ಯಾವಳಿ ತೋರಿಸುತ್ತದೆ. ಒಬ್ಬ ವ್ಯಕ್ತಿ ಸ್ಕೂಟರ್‌ನಿಂದ ಇಳಿದು ದಂಪತಿಗಳತ್ತ ಬಂದೂಕನ್ನು ತೋರಿಸುತ್ತಾನೆ, ಇನ್ನೊಬ್ಬನು ಅವರನ್ನು ಪರೀಕ್ಷಿಸುತ್ತಿರುವಂತೆ ತೋರುತ್ತಾನೆ.

20 ರೂಪಾಯಿಯ ನೋಟು ಹೊರತುಪಡಿಸಿ ದಂಪತಿ ಬಳಿ ಏನೂ ಇಲ್ಲ ಎಂದು ಅರಿತ ದರೋಡೆಕೋರರು ವಾಹನವೇರಿ ಹೋಗುವ ಮೊದಲು ದಂಪತಿಗೆ ಏನನ್ನೋ ನೀಡುತ್ತಿರುವುದು ಕಂಡುಬಂದಿದೆ. ಬೈಕ್‌ನಲ್ಲಿ ಬಂದ ದರೋಡೆಕೋರರು ತಮಗೆ 100 ರೂಪಾಯಿ ನೋಟು ನೀಡಿದ್ದಾರೆ ಎಂದು ದಂಪತಿ ನಂತರ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಎನ್.ಡಿ.ಟಿ.ವಿ ವರದಿ ಹೇಳಿದೆ.

ಸುತ್ತಮುತ್ತ ಅಳವಡಿಸಲಾಗಿದ್ದ ಸುಮಾರು 200 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ದೇವ್ ವರ್ಮಾ ಮತ್ತು ಹರ್ಷ ರಜಪೂತ್ ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು.

ಘಟನೆಯ ಸಮಯದಲ್ಲಿ ಇಬ್ಬರು ದರೋಡೆಕೋರರು ಸಾಕಷ್ಟು ಮದ್ಯ ಸೇವಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ದರೋಡೆಕೋರರು ಅನೇಕ ಪ್ರದೇಶಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು ಎಂದು ತಿಳಿದುಬಂದಿದೆ. ನಾವು ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಶಹದಾರ ಡಿಸಿಪಿ ರೋಹಿತ್ ಮೀನಾ ತಿಳಿಸಿದ್ದಾರೆ.

ತಾವು ದರೋಡೆಕೋರ ನೀರಜ್ ಬವಾನಾ ಗ್ಯಾಂಗ್‌ಗೆ ಸೇರಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅವರ ಯೂಟ್ಯೂಬ್ ವೀಡಿಯೊಗಳಿಂದ ಪ್ರಭಾವಿತರಾಗಿದ್ದೇವೆ ಎಂದು ಇಬ್ಬರು ದರೋಡೆಕೋರರು ಪೊಲೀಸರಿಗೆ ತಿಳಿಸಿದ್ದು, ಅವರ ಬಳಿಯಿದ್ದ 30 ಕದ್ದ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.