ಮಂಗಳೂರು (ದಕ್ಷಿಣ ಕನ್ನಡ): ಕನ್ನಡ ಬಿಗ್ ಬಾಸ್ ಮೂಲಕ ಅಪಾರ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟ ರೂಪೇಶ್ ಶೆಟ್ಟಿ ಇದೀಗ ತಮ್ಮ ಹೊಸ ಸಿನಿಮಾ ‘ಸರ್ಕಸ್’ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.ಕರಾವಳಿಯ ನಟ ರೂಪೇಶ್ ಶೆಟ್ಟಿ ಅಭಿನಯದ ಸರ್ಕಸ್ ಸಿನಿಮಾ ಇದೇ ಜೂನ್ 23ರಂದು ವಿಶ್ವಾದ್ಯಂತ ತೆರೆಕಾಣಲಿದೆ
ರೂಪೇಶ್ ಶೆಟ್ಟಿ ಪ್ರತಿಕ್ರಿಯೆ
ಸರ್ಕಸ್’ ತುಳು ಸಿನಿಮಾ. ಈಗಾಗಲೇ ಕೆಲವು ತುಳು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಇವರು ಸರ್ಕಸ್ ಸಿನಿಮಾದಲ್ಲಿಯೂ ನಾಯಕ ನಟ. ಬಿಗ್ ಬಾಸ್ ವಿನ್ನರ್ ಆದ ಬಳಿಕ ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾವನ್ನು ಅಭಿಮಾನಿಗಳು ಗೆಲ್ಲಿಸಲಿದ್ದಾರೆ ಎಂಬುದು ರೂಪೇಶ್ ವಿಶ್ವಾಸ.
ಕರಾವಳಿಯ ಹುಡುಗ ರೂಪೇಶ್ ಶೆಟ್ಟಿ ಬಿಗ್ ಬಾಸ್ ಒಟಿಟಿ ಮತ್ತು ಸೀಸನ್ 9ರ ವಿಜೇತರಾಗಿ ಹೊರಹೊಮ್ಮಿದವರು. ಎರಡು ಬಾರಿಯೂ ಬಿಗ್ ಬಾಸ್ನಲ್ಲಿ ಅದೃಷ್ಟವಂತರಾಗಿದ್ದ ಶೆಟ್ಟಿ ಇದೀಗ ತಮ್ಮ ಹೊಸ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಇದಕ್ಕೂ ಮೊದಲು ರೂಪೇಶ್ ಶೆಟ್ಟಿ ಅಭಿನಯಿಸಿದ್ದ ಗಿರಿಗಿಟ್ ಎಂಬ ತುಳು ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಅದಕ್ಕೂ ಮೊದಲು ಮತ್ತು ನಂತರದಲ್ಲಿ ಕೆಲವು ಸಿನಿಮಾಗಳಲ್ಲಿ ರೂಪೇಶ್ ಶೆಟ್ಟಿ ನಟಿಸಿದ್ದರಾದರೂ ಅದೃಷ್ಟ ಕೂಡಿ ಬಂದಿರಲಿಲ್ಲ. ಇದೀಗ ಸರ್ಕಸ್ ಕೂಡ ಗಿರಿಗಿಟ್ನಂತೆ ಸೂಪರ್ ಹಿಟ್ ಆಗಲಿದೆ ಎಂಬ ನಂಬಿಕೆ ಅವರಲ್ಲಿದೆ. ಗಿರಿಗಿಟ್ ತಂಡವೇ ಈ ಸಿನಿಮಾದಲ್ಲಿಯೂ ಕೆಲಸ ಮಾಡಿದೆ. ಚಿತ್ರಕಥೆ ಮತ್ತು ನಿರ್ದೇಶನವನ್ನು ರೂಪೇಶ್ ಶೆಟ್ಟಿ ಮಾಡಿದ್ದಾರೆ.
ಜೂನ್ 23ಕ್ಕೆ ಬಿಡುಗಡೆ: ರೂಪೇಶ್ ಶೆಟ್ಟಿ ನಿರ್ದೇಶನ ಮಾಡುವುದರ ಜೊತೆಗೆ ಅಭಿನಯಿಸಿರುವ ‘ಸರ್ಕಸ್’ ಇದೇ ಜೂನ್ 23ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
ಸಾಮಾನ್ಯವಾಗಿ ತುಳು ಚಿತ್ರಗಳು ಹಾಸ್ಯಮಯವಾಗಿರುತ್ತದೆ. ‘ಸರ್ಕಸ್’ನಲ್ಲೂ ಅದೇ ಪ್ರಧಾನ ವಸ್ತು. ತುಳು ಚಿತ್ರರಂಗದ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ ಹಾಗು ಪಂಚಮಿ ಭೋಜರಾಜ್ ತಾರಾಗಣದಲ್ಲಿದ್ದಾರೆ.
ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ತಯಾರಾಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ನಿರ್ಮಿಸಿದ್ದಾರೆ. ಕರಾವಳಿ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮರಾ ವರ್ಕ್, ರಾಹುಲ್ ವಶಿಷ್ಠ ಸಂಕಲನ, ಲೋಯ್ ಅವರ ಸಂಗೀತ ಚಿತ್ರಕ್ಕಿದೆ.
ಈಟಿವಿ ಭಾರತದ ಜೊತೆಗೆ ಮಾತನಾಡಿದ ರೂಪೇಶ್ ಶೆಟ್ಟಿ, “ಬಿಗ್ ಬಾಸ್ ಬೇರೆಯೇ ಪ್ರಪಂಚ. ಮತ್ತೆ ಸಿನಿಮಾ ಪ್ರಪಂಚಕ್ಕೆ ಬಂದಿದ್ದೇನೆ. ಇದು ನನ್ನ 15ನೇ ಸಿನಿಮಾ. ಇದೊಂದು ಅಗ್ನಿಪರೀಕ್ಷೆ. ಈಗಾಗಲೇ 10 ಸಾವಿರ ಮಂದಿ ಪ್ರೀಮಿಯರ್ ಶೋನಲ್ಲಿ ನಮ್ಮ ಸಿನಿಮಾ ನೋಡಿದ್ದಾರೆ. ಅದ್ಭುತ ಪ್ರತಿಕ್ರಿಯೆ ಬಂದಿದೆ. ಮನರಂಜನೆ ಗಿರಿಗಿಟ್ನಲ್ಲಿ ಇದ್ದಕ್ಕಿಂತಲೂ ಸರ್ಕಸ್ ಸಿನಿಮಾದಲ್ಲಿ ಜಾಸ್ತಿ ಇದೆ. ಅಲ್ಲಿ ಬಜೆಟ್ ರಿಸ್ಟ್ರಿಕ್ಷನ್ ಇತ್ತು. ಸರ್ಕಸ್ ಸಿನಿಮಾದಲ್ಲಿ ಅದು ಇರಲಿಲ್ಲ. ಕತಾರ್, ಮಸ್ಕತ್, ದುಬೈ, ಬಹರೈನ್, ಅಮೆರಿಕ, ಕೆನಡಾ ಸೇರಿದಂತೆ ಹಲವೆಡೆ ಪ್ರೀಮಿಯರ್ ಶೋ ನಡೆಸಿದ್ದೇವೆ. ಕರಾವಳಿಯಲ್ಲಿ 20 ಥಿಯೇಟರ್, ದುಬೈನಲ್ಲಿ 14 ಥಿಯೆಟರ್ನಲ್ಲಿ ಸಿನಿಮಾ ಪ್ರದರ್ಶನ ಆಗಲಿದೆ. 50 ಸಿನಿಮಾ ಥಿಯೇಟರ್ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಇದೆ” ಎಂದು ತಿಳಿಸಿದರು.
ಪ್ರೀಮಿಯರ್ ಶೋಗೆ ಉತ್ತಮ ಪ್ರತಿಕ್ರಿಯೆ: ಸರ್ಕಸ್ಸಿನಿಮಾ ಬಿಡುಗಡೆಗೂ ಮುನ್ನ ದೇಶ- ವಿದೇಶಗಳಲ್ಲಿ 51 ಪ್ರೀಮಿಯರ್ ಶೋಗಳನ್ನು ನಡೆಸಲಾಗಿದೆ. ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ ಎನ್ನುತ್ತಾರೆ ಚಿತ್ರತಂಡದವರು.
ತುಳು ಸಿನಿಮಾ ರಂಗದಲ್ಲಿ ಅತಿ ದೊಡ್ಡ ಸೂಪರ್ ಹಿಟ್ ಚಿತ್ರ ‘ಗಿರಿಗಿಟ್’ ಬಳಿಕ ರೂಪೇಶ್ ಶೆಟ್ಟಿ ನಿರ್ದೇಶಿಸಿರುವ 2ನೇ ಚಿತ್ರ ಸರ್ಕಸ್. ಗಿರಿಗಿಟ್ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದಾರೆ. ಸಲಗ ಖ್ಯಾತಿಯ ಯಶ್ ಶೆಟ್ಟಿ ಸರ್ಕಸ್ ಮೂಲಕ ತುಳು ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದಾರೆ. ಅದೇ ರೀತಿ ರಚನಾ ರೈ ಎಂಬ ನಟಿಯನ್ನೂ ಪರಿಚಯಿಸಲಾಗಿದೆ. ತುಳು ಚಿತ್ರಗಳ ಪೈಕಿ ‘ಗಿರಿಗಿಟ್’ ಅತ್ಯಂತ ಯಶಸ್ವಿಯಾದ ಹಾಸ್ಯಮಯ ಚಿತ್ರ. ಹಲವು ದೇಶಗಳಲ್ಲಿ ಗಿರಿಗಿಟ್ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಂಡಿತ್ತು. ಈಗ ಅದೇ ತಂಡ ‘ಸರ್ಕಸ್’ ಮಾಡಿದೆ.