2023ರ ACC ಮಹಿಳಾ ಉದಯೋನ್ಮುಖ ಟೀಮ್ ಕಪ್ ವುಮೆನ್ಸ್​​​​​​ ಇಂಡಿಯಾ ಎ ಟೀಂ ಮಡಿಲಿಗೆ

ಮೊಂಗ್ ಕಾಕ್: ಹಾಂಕಾಂಗ್‌ನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿದ್ದ ಮಹಿಳಾ ಉದಯೋನ್ಮುಖ ತಂಡಗಳ ಫೈನಲ್ ಪಂದ್ಯದಲ್ಲಿ ಭಾರತ ‘ಎ’ ತಂಡವು ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತೀಯ ಮಹಿಳಾ ಎ ತಂಡ ಪ್ರಶಸ್ತಿಗೆ ಭಾಜನವಾಗಿದೆ. ಮೊದಲಿಗೆ ಬ್ಯಾಟ್​ ಬೀಸಿದ ಭಾರತದ ಮಹಿಳೆಯರ ಎ ಟೀಮ್​, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತು. ಈ ಮೂಲಕ ಎದುರಾಳಿ ಬಾಂಗ್ಲಾದೇಶ ‘ಎ’ ತಂಡಕ್ಕೆ 128 ರನ್​ಗಳ ಗೆಲುವಿನ ಗುರಿ ನೀಡಿತ್ತು.

ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ‘ಎ’ ತಂಡ ಭಾರತದ ಬೌಲರ್ ಗಳ ಎದುರು ರನ್​ಗಳಿಸಲು ಪರದಾಡಬೇಕಾಯಿತು. ಅಂತಿಮವಾಗಿ ಟೀಂ ಇಂಡಿಯಾದ ಬೌಲರ್ ಗಳ ಎದುರು ಬಾಂಗ್ಲಾದೇಶದ ಮಹಿಳೆಯರ ಎ ತಂಡ 19.2 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 96 ರನ್ ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಟೀಂ ಇಂಡಿಯಾ ಈ ಪಂದ್ಯವನ್ನು 31 ರನ್‌ಗಳಿಂದ ಗೆದ್ದು ಬೀಗಿತು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿದ್ದ 2023 ರ ಮಹಿಳಾ ಉದಯೋನ್ಮುಖ ಟೀಮ್ ಕಪ್ ಅನ್ನು ವುಮೆನ್ಸ್​ ಟೀಮ್ ಇಂಡಿಯಾ ‘ಎ’ ಗೆದ್ದುಕೊಂಡಿದೆ. ಅಮೋಘ ಪ್ರದರ್ಶನ ನೀಡಿದ ಟೀಂ ಇಂಡಿಯಾ 19.2 ಓವರ್‌ಗಳಲ್ಲಿ ಬಾಂಗ್ಲಾದೇಶ ತಂಡವನ್ನು ಆಲೌಟ್ ಮಾಡಿ, ಗೆಲುವು ಸಾಧಿಸಿದೆ.

128 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ‘ಎ’ ತಂಡಕ್ಕೆ ಟೀಂ ಇಂಡಿಯಾ ಆರಂಭಿಕ ಆಘಾತ ನೀಡಿತು. ಆ ಬಳಿಕ ಬಂದ ಎಲ್ಲ ಬ್ಯಾಟರ್​ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾಗಿ ಅಂತಿಮವಾಗಿ ಬಾಂಗ್ಲಾದೇಶ ತಂಡ 19.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 96 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಪರ ಮನ್ನತ್ ಕಶ್ಯಪ್ ಆರಂಭದಲ್ಲಿ ಎರಡು ಆಘಾತ ನೀಡುವುದರೊಂದಿಗೆ ಒಟ್ಟು 3 ವಿಕೆಟ್ ಪಡೆದರೆ, ಶ್ರೇಯಾಂಕ ಪಾಟೀಲ್ ಕೂಡ ಉತ್ತಮ ಬೌಲಿಂಗ್ ಮಾಡಿ ಬಾಂಗ್ಲಾದೇಶ ಆಟಗಾರರನ್ನು ಕೆಣಕಿದರು. ಪಾಟೀಲ್ 4 ಓವರ್ ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದರು. ಬಾಂಗ್ಲಾದೇಶದ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು.

ಇಂದು ಮೊಂಗ್ ಕಾಕ್‌ನಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಉದಯೋನ್ಮುಖ ಟೀಮ್ ಕಪ್ 2023 ರ ಅಂತಿಮ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ದಿನೇಶ್ ವೃಂದಾ 29 ಎಸೆತ ಎದುರಿಸಿ 36 ರನ್ ಗಳಿಸಿದರು. ಅವರ ಈ ಸ್ಕೋರ್​​ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ ಸಹ ಇತ್ತು. ಇನ್ನು ಕನಿಕಾ ಅಹುಜಾ 23 ಎಸೆತಗಳನ್ನು ಎದುರಿಸಿ, 4 ಬೌಂಡರಿಗಳ ನೆರವಿನಿಂದ 30 ರನ್ ಗಳಿಸಿದರು. ಆದರೆ, ನಾಯಕಿ ಶ್ವೇತಾ ಸೆಹ್ರಾವತ್ 13 ರನ್ ಗಳಿಸಲಷ್ಟೇ ಶಕ್ತರಾದರು. ವುಮೆನ್ಸ್ ಟೀಂ ಇಂಡಿಯಾ ಸಣ್ಣ ಸಣ್ಣ ಮೊತ್ತಗಳ ಮೂಲಕ 127 ರನ್​​ಗಳನ್ನ ಸೇರಿಸುವ ಮೂಲಕ ಎದುರಾಳಿಗೆ 128 ರನ್​ಗಳ ಟಾರ್ಗೆಟ್​ ನೀಡಿತು.