ಮಣಿಪಾಲ: ಮಣಿಪಾಲ ಆರೋಗ್ಯ ಕಾರ್ಡ್-2023 ನೋಂದಣಿ ಪ್ರಾರಂಭ

ಮಣಿಪಾಲ: ಮಣಿಪಾಲ ಆರೋಗ್ಯ ಸಮೂಹ ಸಂಸ್ಥೆಗಳ ಮಣಿಪಾಲ ಆರೋಗ್ಯ ಕಾರ್ಡ್-2023 ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್ ಹೇಳಿದರು.

ಅವರು ಮಂಗಳವಾರದಂದು ಮಣಿಪಾಲ ಆರೋಗ್ಯ ಕಾರ್ಡ್-2023 ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.

ಡಾ. ಟಿ.ಎಂ.ಎ ಪೈ ಅವರ 125 ನೇ ಜನ್ಮ ದಿನಾಚರಣೆಯಂದು ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಸಮಾಜಕ್ಕೆ ಸುಲಭವಾಗಿ ಸೌಲಭ್ಯ ದೊರಕುವಂತೆ ಮಾಡಿದ ದೂರದೃಷ್ಟಿಯ ಸೂರ್ತಿದಾಯಕ ನಾಯಕ ನಮಗೆ ಮಾದರಿ ಎಂದರು.

ಕಾರ್ಡ್‌ಗಳ ದರ ಪಟ್ಟಿ:

1 ವರ್ಷದ ಯೋಜನೆ ಸದಸ್ಯತ್ವ ಪಡೆಯಲು ಒಬ್ಬರು 300 ರೂ. ಪಾವತಿ ಮಾಡಬೇಕು. ಕೌಟುಂಬಿಕ ಕಾರ್ಡ್‌ ಪಡೆದರೆ ಕಾರ್ಡ್‌ ಹೊಂದಿರುವ ವ್ಯಕ್ತಿ, 25 ವರ್ಷದ ಒಳಗಿನ ಮಕ್ಕಳಿಗೆ 600 ರೂ. ಮತ್ತು ಕೌಟುಂಬಿಕ ಪ್ಲಸ್ ( ತಂದೆ- ತಾಯಿ- ಅತ್ತೆ- ಮಾವ) ಯೋಜನೆಗೆ 750 ರೂ. ದರವಿದೆ.

2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ 500 ರೂ., ಕುಟುಂಬಕ್ಕೆ 800 ರೂ., ಕೌಟುಂಬಿಕ ಪ್ಲಸ್ ಯೋಜನೆಗೆ 950 ರೂ. ದರವಿದೆ.

ಕಾರ್ಡ್ ಸೌಲಭ್ಯ:

ತಜ್ಞ ಮತ್ತು ವಿಶೇಷ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ಶೇ 50 (ಒಪಿಡಿ ದಿನಗಳಂದು), ಹೊರರೋಗಿ ಲ್ಯಾಬ್‌ ಪರೀಕ್ಷೆಗೆ ಶೇ 30, ಸಿಟಿ/ ಎಂಆರ್‌ಐ/ ಅಲ್ಟ್ರಾ ಸೌಂಡ್‌ ಪರೀಕ್ಷೆ ಹಾಗೂ ಹೊರರೋಗಿ ಮಧುಮೇಹ ತಪಾಸಣೆಗೆ ಶೇ 20ರಷ್ಟು ರಿಯಾಯಿತಿ ಸಿಗಲಿದೆ. ಹೊರರೋಗಿ ಡಯಾಲಿಸಿಸ್ ಗೆ 100 ರೂ ರಿಯಾಯತಿ ಹಾಗೂ ಮೆಡಿಕಲ್ ಶಾಪ್‌ಗಳಲ್ಲಿ ಶೇ 12ರಷ್ಟು ರಿಯಾಯಿತಿ ಸಮಾನ್ಯ ವಾರ್ಡ್ ನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಮತ್ತು ಪ್ಯಾಕೇಜ್ಗಳನ್ನು ಹೊರತುಪಡಿಸಿ ಶೇ. 25 ರಿಯಾಯತಿ ದೊರೆಯಲಿದೆ.

ರಾಜ್ಯದಾದ್ಯಂತ ಸುಮಾರು 12 ರಿಂದ 15 ಜಿಲ್ಲೆಗಳಲ್ಲಿ ಸೇವೆಯನ್ನು ವಿಸ್ತರಿಸಲಾಗಿದ್ದು, 6,40,000 ಸದಸ್ಯರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ.ಟಿ.ಎಂ.ಪೈ ಆಸ್ಪತ್ರೆ ಉಡುಪಿ, ಡಾ.ಟಿ.ಎಂ.ಎ ರೋಟರಿ ಸಾಸ್ಪತ್ರೆ ಕಾರ್ಕಳ, ಕೆ.ಎಂಸಿ ಆಸ್ಪತ್ರೆ ಅತ್ತಾವರ ಮತ್ತು ಮಂಗಳೂರು, ದುರ್ಗಾ ಸಂಜೀವನಿ ಆಸ್ಪತ್ರೆ ಕಟೀಲು ಮತ್ತು ಮಣಿಪಾಲ್ ಆಸ್ಪತ್ರೆ ಗೋವಾ ಮುಂತಾದೆಡೆ ಪ್ರಯೋಜನ ಪಡೆಯಬಹುದು ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್‌ https://manipalhealthcard.com ಗೆ ಭೇಟಿ ನೀಡಬಹುದು ಅಥವಾ ದೂ.ಸಂಖ್ಯೆ: 9980854700/08202923748 ಸಂಪರ್ಕಿಸಬಹುದು.

ಮಾಹೆ ಉಪಕುಲಪತಿ ಡಾ, ಶರತ್ ಕುಮಾರ್ ರಾವ್, ಕೆ.ಎಂಸ್.ಸಿ ಡೀನ್ ಪದ್ಮರಾಜ್ ಹೆಗ್ಡೆ, ಕೆ.ಎಂ.ಸಿ ಮಂಗಳೂರು ಡೀನ್ ಡಾ ಬಿ ಉನ್ನಿಕೃಷ್ಣನ್ ,ಮಾರ್ಕೆಟಿಂಗ್ ವಿಭಾಗದ ಮೋಹನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.