ಉಚಿತ ವಿದ್ಯುತ್ ಯೋಜನೆ ನೋಂದಣಿಗೆ ಸರ್ವರ್ ಕಾಟ; ನಾಲ್ಕು ಜಿಲ್ಲೆಗಳಿಂದ 21160 ಅರ್ಜಿ ಸ್ವೀಕಾರ

ಮಂಗಳೂರು/ ಉಡುಪಿ: ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ 200 ಉಚಿತ ವಿದ್ಯುತ್ ಯೋಜನೆ ನೋಂದಣಿಯ ಎರಡನೇ ದಿನ ಅವಿಭಜಿತ ದ.ಕ ಜಿಲ್ಲೆಯಲ್ಲಿ ಜನರು ಸರ್ವರ್ ಸಮಸ್ಯೆ ಮತ್ತು ಇಂಟರ್ನೆಟ್ ಸಮಸ್ಯೆಗಳನ್ನು ಎದುರಿಸಿದರು.

ಮಂಗಳೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದರೂ ಮಧ್ಯಾಹ್ನದ ವೇಳೆಗೆ ಸರ್ವರ್ ಸಮಸ್ಯೆಯಿಂದ ಸಂಪೂರ್ಣ ಸ್ಥಗಿತಗೊಂಡಿತ್ತು. ಮಂಗಳೂರು ವನ್, ಗ್ರಾಮ ವನ್ ನ ಎಲ್ಲಾ ಕೇಂದ್ರಗಳು, ಮೆಸ್ಕಾಂ ಕಚೇರಿಗಳು,ಇಂದಿರಾ ಸೇವಾ ಕೌಂಟರ್‌ಗಳು ಎಲ್ಲೆಲ್ಲೂ ಸರ್ವರ್ ಸಮಸ್ಯೆ ತಲೆದೋರಿದೆ.

ಸೋಮವಾರ ಸಂಜೆಯವರೆಗೆ ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ 21160 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ 3534, ಉಡುಪಿಯಲ್ಲಿ 5800, ಶಿವಮೊಗ್ಗದಲ್ಲಿ 6407 ಹಾಗೂ ಚಿಕ್ಕಮಗಳೂರಿನಲ್ಲಿ 5427 ಅರ್ಜಿಗಳು ಬಂದಿವೆ. ಉಡುಪಿಯ 191 ಗ್ರಾಮ ವನ್ ಕೇಂದ್ರಗಳಲ್ಲಿ ನೋಂದಣಿ ನಡೆಯುತ್ತಿದ್ದು, ಮಧ್ಯಾಹ್ನದವರೆಗೆ ಪ್ರಕ್ರಿಯೆಯು ಉತ್ತಮವಾಗಿ ನಡೆಯಿತು. ನಂತರ ಸರ್ವರ್ ಸಮಸ್ಯೆಯಿಂದಾಗಿ ಪ್ರಕ್ರಿಯೆ ಕುಂಠಿತವಾಯಿತು. ಕುಂದಾಪುರ ಹಾಗೂ ಬೈಂದೂರಿನಲ್ಲಿ ಗ್ರಾಮೀಣ ಭಾಗದ ಜನತೆ ತಮ್ಮ ದಿನನಿತ್ಯದ ಕೆಲಸ ಬಿಟ್ಟು ಗ್ರಾ.ಪಂ.ಕೇಂದ್ರಗಳಿಗೆ ಎಡತಾಕಿದರೂ ಸರ್ವರ್ ಕಾರ್ಯನಿರ್ವಹಿಸದ ಕಾರಣ ವಾಪಸ್ಸು ಹೋಗಬೇಕಾಯಿತು. ಅತ್ತ ಕಾರ್ಕಳ, ಸುಳ್ಯ, ಪುತ್ತೂರು ಬಂಟ್ವಾಳದಲ್ಲೂ ಇದೇ ಸಮಸ್ಯೆ ತಲೆದೋರಿದೆ.

ಸಾರ್ವಜನಿಕರಿಂದ ಮೊಬೈಲ್ ನಂಬರ್ ಗಳನ್ನು ಪಡೆದು ಬೇರೆ ದಿನ ಬರುವಂತೆ ತಿಳಿಸಲಾಗಿದೆ.