ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಅಮೇರಿಕಾ ಪ್ರವಾಸದಲ್ಲಿದ್ದು ಮಂಗಳವಾರ ಟೆಕ್ ದಿಗ್ಗಜ, ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರನ್ನು ಭೇಟಿಯಾದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್, ‘‘ನಾನು ಮೋದಿ ಅವರ ಅಭಿಮಾನಿ” ಎಂದು ಹೇಳಿದ್ದಾರೆ.
“ಇದು ಪ್ರಧಾನ ಮಂತ್ರಿಯೊಂದಿಗಿನ ಅದ್ಭುತ ಸಭೆ ಮತ್ತು ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಹಾಗಾಗಿ, ನಾವು ಹಲವು ಕಾಲದಿಂದ ಒಬ್ಬರಿಗೊಬ್ಬರು ಪರಿಚಿತರು. ಭಾರತದ ಭವಿಷ್ಯದ ಬಗ್ಗೆ ನಾನು ನಂಬಲಾಗದಷ್ಟು ಉತ್ಸುಕನಾಗಿದ್ದೇನೆ. ಪ್ರಪಂಚದ ಯಾವುದೇ ದೊಡ್ಡ ದೇಶಕ್ಕಿಂತ ಭಾರತವು ಹೆಚ್ಚಿನ ಭರವಸೆಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ.” ಎಂದು ಮಸ್ಕ್ ಹೇಳಿದ್ದಾರೆ.
ಈ ಹಿಂದೆ 2015 ರಲ್ಲಿ ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟಾರ್ಸ್ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ, ಮಸ್ಕ್ ಅವರನ್ನು ಭೇಟಿಯಾಗಿದ್ದರು.
ಟೆಸ್ಲಾ ಕಾರುಗಳು ಭಾರತದಲ್ಲಿ ಓಡಾಡುವ ಬಗ್ಗೆ ಕೇಳಿದಾಗ, “ಟೆಸ್ಲಾ ಭಾರತಕ್ಕೆ ಬರುತ್ತದೆ ಮತ್ತು ಮಾನವೀಯವಾಗಿ ಸಾಧ್ಯವಾದಷ್ಟು ಬೇಗ ಅದನ್ನು ಮಾಡುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದಿದ್ದಾರೆ.
ಪಿಎಂ ಮೋದಿ ನಿಜವಾಗಿಯೂ ಭಾರತದ ಬಗ್ಗೆ ಕಾಳಜಿ ವಹಿಸುತ್ತಾರೆ ಏಕೆಂದರೆ ಅವರು ಭಾರತದಲ್ಲಿ ಗಮನಾರ್ಹ ಹೂಡಿಕೆ ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ, ಇದು ನಾವು ಮಾಡಲು ಒಲವು ತೋರುವ ಸಂಗತಿಯಾಗಿದೆ. ನಾವು ಸರಿಯಾದ ಸಮಯವನ್ನು ಕಂಡುಕೊಳ್ಳಬೇಕು. ಅವರು ನಿಜವಾಗಿಯೂ ಭಾರತಕ್ಕಾಗಿ ಸರಿಯಾದ ಕೆಲಸವನ್ನು ಮಾಡಲು ಬಯಸುತ್ತಾರೆ. ಅವರು ಮುಕ್ತ ವಾತಾವರಣ ನಿರ್ಮಿಸುತ್ತಾರೆ ಮತ್ತು ಕಂಪನಿಗಳಿಗೆ ಬೆಂಬಲ ನೀಡುತ್ತಾರೆ. ಆದರೆ ನಿಸ್ಸಂಶಯವಾಗಿ, ಅದೇ ಸಮಯದಲ್ಲಿ, ಅದು ಭಾರತಕ್ಕೆ ಪ್ರಯೋಜನ ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ” ಎಂದು ಟೆಕ್ ದಿಗ್ಗಜ ಹೇಳಿದ್ದಾರೆ.
ಎಲಾನ್ ಮಸ್ಕ್ ಅವರೊಂದಿಗಿನ ಭೇಟಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ, “ಇಂದು ನಿಮ್ಮ ಜೊತೆ ಭೇಟಿ ನಡೆಸಿರುವುದು ಅತ್ಯುತ್ತಮವಾಗಿತ್ತು. ನಾವು ಎನರ್ಜಿಯಿಂದ ಹಿಡಿದು ಆಧ್ಯಾತ್ಮಿಕತೆಯವರೆಗಿನ ವಿಷಯಗಳ ಕುರಿತು ಬಹುಮುಖಿ ಸಂಭಾಷಣೆಗಳನ್ನು ನಡೆಸಿದ್ದೇವೆ” ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಮಸ್ಕ್, “ನಿಮ್ಮನ್ನು ಪುನಃ ಭೇಟಿಯಾಗಿರುವುದು ಗೌರವದ ವಿಷಯ” ಎಂದಿದ್ದಾರೆ.
ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಲ್ಲಿನ ವ್ಯಾಪಾರೋದ್ಯಮಿಗಳನ್ನು ಭೇಟಿಯಾಗಿದ್ದಾರೆ.