ಉಡುಪಿ: ಕಳೆದೆರಡು ತಿಂಗಳುಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಅಂಬಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಶನಿವಾರ ಖಾಲಿ ಕೊಡದೊಂದಿಗೆ ನುಗ್ಗಿದ ಗ್ರಾಮಸ್ಥರು, ಕಚೇರಿಯೊಳಗೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಕಿದಿಯೂರು ಗ್ರಾಮದ ದಿಡ್ಡಿ ಮನೆಗಳಿಗೆ ಕಳೆದ ಎರಡು ತಿಂಗಳುಗಳಿಂದ ಸಮರ್ಪಕವಾಗಿ ಗ್ರಾಪಂ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಕಚೇರಿ ಆವರಣಕ್ಕೆ ಆಗಮಿಸಿದರು. ಗ್ರಾಪಂ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದ ಮಹಿಳೆಯರು ನೇರವಾಗಿ ಕೊಡಗಳೊಂದಿಗೆ ನುಗ್ಗಿದರು.
ಕಚೇರಿಯೊಳಗೆ ಕೊಡಗಳನ್ನಿಟ್ಟು ಧರಣಿ ಕುಳಿತು ಸ್ಥಳಕ್ಕೆ ಅಧ್ಯಕ್ಷರು ಹಾಗೂ ಪಿಡಿಓ ಆಗಮಿಸಿ ನೀರಿನ ಸಮಸ್ಯೆ ಪರಿಹರಿಸಿಕೊಡುವಂತೆ ಪಟ್ಟು ಹಿಡಿದರು. ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ನೀರು ಕೊಡಲು ಸಾಧ್ಯವಾಗದ ಪಂಚಾಯತ್‌ಗೆ ಬೀಗ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ತಿಂಗಳಿನಲ್ಲಿ ಮೂರು ಬಾರಿ ಮಾತ್ರ ನೀರು ಕೊಟ್ಟಿದ್ದಾರೆ. ಅದರ ನಂತರ ನೀರು ಕೊಡಲಿಲ್ಲ. ಸ್ಥಳೀಯರೊಬ್ಬರು ನಮಗೆ ನೀರು ಪೂರೈಕೆ ಮಾಡುತ್ತಿದ್ದಾರೆ. ಅವರು ನೀರು ಪೂರೈಸದಿದ್ದರೆ ನಮಗೆ ನೀರೇ ಇಲ್ಲ. ನಾವು ಇನ್ನು ಎಲ್ಲಿಗೆ ಹೋಗುವುದು. ಕೆಲವು ಪ್ರದೇಶಗಳಿಗೆ ಗ್ರಾಪಂನವರು ನೀರು ಕೊಡುತ್ತಾರೆ. ಆದರೆ ನಮ್ಮಲ್ಲಿಗೆ ಬರುವುದಿಲ್ಲ. ಸುಮಾರು 80 ಮನೆಯವರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರಾದ ಬೇಬಿ ಆರೋಪಿಸಿದರು.
ಬಳಿಕ ಕಚೇರಿಗೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ರೋಹಿಣಿ ಜೊತೆ ನೀರಿನ ಸಮಸ್ಯೆ ಕುರಿತು ವಾಗ್ವಾದ ನಡೆಸಿದರು. ಎರಡು ತಿಂಗಳುಗಳಿಂದ ನೀರಿಲ್ಲದೆ ಜನ ಪರದಾಡುತ್ತಿದ್ದರೂ ಅಧ್ಯಕ್ಷರು ಒಮ್ಮೆಯೂ ಭೇಟಿ ನೀಡದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಬಳಿಕ ಮಾತುಕತೆ ನಡೆಸಿ, ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದಾಗಿ ಅಧ್ಯಕ್ಷರು ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ಅಂತ್ಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಂಜನ್ ಕಿದಿಯೂರು, ಜನಾರ್ದನ ಕಿದಿಯೂರು, ಯತಿರಾಜ್ ಕಿದಿಯೂರು, ದೇವರಾಜ್ ಕಿದಿಯೂರು, ಶಾರದಾ ಪೂಜಾರ್ತಿ, ಸುಮತಿ ಕಿದಿಯೂರು, ಅಂಬಾ, ಗೀತಾ, ವಿಜಯ, ಸತ್ಯವತಿ, ವಿಠಲ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.